ವಿಜಯ್ ಮಲ್ಯ ಆಸ್ತಿ ಮಟ್ಟುಗೋಲಿಗೆ ದಿಲ್ಲಿ ನ್ಯಾಯಾಲಯ ಆದೇಶ
ಹೊಸದಿಲ್ಲಿ, ಮಾ. 27: ಹಣ ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ನೋಟಿಸಿನಿಂದ ಹಲವು ಬಾರಿ ತಪ್ಪಿಸಿಕೊಂಡು ‘ಘೋಷಿತ ಅಪರಾಧಿ’ ಎಂದು ಪರಿಗಣಿತನಾಗಿರುವ ವಿಜಯ್ ಮಲ್ಯ ಸೊತ್ತು ಮುಟ್ಟುಗೋಲು ಹಾಕಿಕೊಳ್ಳುವಂತೆ ದಿಲ್ಲಿ ನ್ಯಾಯಾಲಯ ಮಂಗಳವಾರ ಆದೇಶಿಸಿದೆ. ಬೆಂಗಳೂರು ಪೊಲೀಸ್ ಆಯುಕ್ತರ ಮೂಲಕ ಸೊತ್ತು ಮುಟ್ಟುಗೋಲು ಹಾಕಿಕೊಳ್ಳುವಂತೆ ಹಾಗೂ ಆದೇಶದ ಅನುಸರಣೆಗೆ ಸಂಬಂಧಿಸಿ ಮೇ 8ರ ಒಳಗಡೆ ವರದಿ ನೀಡುವಂತೆ ಮುಖ್ಯ ಮೆಟ್ರೋಪಾಲಿಟಿನ್ ದಂಡಾಧಿಕಾರಿ ದೀಪಕ್ ಶೇರಾವತ್ ಜಾರಿ ನಿರ್ದೇಶನಾಲಯಕ್ಕೆ ನಿರ್ದೇಶಿಸಿದ್ದಾರೆ.
ಮಲ್ಯ ಸೊತ್ತು ಮುಟ್ಟುಗೋಲು ಹಾಕಲು ಅನುಮತಿ ಕೋರಿ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ಇಂದು ವಿಚಾರಣೆ ನಡೆಸಿತು. ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆ ಉಲ್ಲಂಘನೆ ಪ್ರಕರಣದಲ್ಲಿ ನೋಟಿಸಿನಿಂದ ತಪ್ಪಿಸಿಕೊಂಡಿದ್ದ ಮಲ್ಯರನ್ನು ಘೋಷಿತ ಅಪರಾಧಿ ಎಂದು ಜನವರಿ 4ರಂದು ನ್ಯಾಯಾಲಯ ಘೋಷಿಸಿತ್ತು.
ಮಲ್ಯ ವಿರುದ್ಧ ಕಳೆದ ವರ್ಷ ಎಪ್ರಿಲ್ 12ರಂದು ‘ಮುಕ್ತ’ ಜಾಮೀನು ರಹಿತ ಬಂಧನಾದೇಶ ಹೊರಡಿಸಲಾಗಿತ್ತು. ಜಾಮೀನು ರಹಿತ ಬಂಧನಾದೇಶಕ್ಕಿಂತ ಭಿನ್ನವಾದ ‘ಮುಕ್ತ’ ಬಂಧನಾದೇಶ ಯಾವುದೇ ಸಮಯ ಮಿತಿಯನ್ನು ಬೇಡುವುದಿಲ್ಲ.