ಮುಂಬೈ ಬೆಂಕಿ ಅನಾಹುತ: ತನ್ನ ಬಂಧನದ ವಿರುದ್ಧ ಸಲ್ಲಿಸಿದ ಮನವಿ ಹಿಂದೆಗೆದ ಕಮಲಾ ಮಿಲ್ಸ್ ಮಾಲಕ
Update: 2018-03-27 20:01 IST
ಹೊಸದಿಲ್ಲಿ, ಮಾ. 27: ಕಳೆದ ವರ್ಷ ಡಿಸೆಂಬರ್‌ನಲ್ಲಿ 14 ಜನರ ಸಾವಿಗೆ ಕಾರಣವಾದ ಅಗ್ನಿ ದುರಂತಕ್ಕೆ ಸಂಬಂಧಿಸಿ ಬಂಧನದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾಗಿದ್ದ ಮನವಿಯನ್ನು ಮುಂಬೈಯ ಕಮಲಾ ಮಿಲ್ಸ್‌ನ ಮಾಲಕ ಹಿಂದೆಗೆದುಕೊಂಡಿದ್ದಾರೆ. ಜಾಮೀನು ಕೋರಲು ವಿಚಾರಣಾ ನ್ಯಾಯಾಲಯ ಸಂಪರ್ಕಿಸುವಂತೆ ನ್ಯಾಯಮೂರ್ತಿ ಎ.ಕೆ. ಸಿಕ್ರಿ ಹಾಗೂ ಅಶೋಕ್ ಭೂಷಣ್ ಅವರನ್ನೊಳಗೊಂಡ ಪೀಠ ತಿಳಿಸಿದ ಬಳಿಕ ರವಿ ಸೂರಜ್ಮಲ್ ಭಂಡಾರಿ ತನ್ನ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಹಿಂದೆಗೆದುಕೊಂಡಿದ್ದಾರೆ.
ಬಂಧಿತನಾಗಿರುವ ವ್ಯಕ್ತಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವ ಅರ್ಜಿ ಹೇಬಿಯಸ್ ಕಾರ್ಪಸ್. ಅಗ್ನಿ ದುರಂತಕ್ಕೆ ತಾನು ಬಾಧ್ಯಸ್ಥನಲ್ಲ ಎಂದು ಮನವಿಯಲ್ಲಿ ಪ್ರತಿಪಾದಿಸಿರುವ ಭಂಡಾರಿ, ತನ್ನ ಬಂಧನವನ್ನು ‘ಅಕ್ರಮ’ ಎಂದು ಹೇಳಿದ್ದಾರೆ.
ವ್ಯಕ್ತಿ ನ್ಯಾಯಾಂಗ ಬಂಧನದಲ್ಲಿರುವಾಗ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಲು ಹೇಗೆ ಸಾಧ್ಯ ಎಂದು ಸುಪ್ರೀಂ ಕೋರ್ಟ್ ಈ ಹಿಂದಿನ ವಿಚಾರಣೆ ಸಂದರ್ಭ ಪ್ರಶ್ನಿಸಿತ್ತು.