×
Ad

ಜೋಡುಕಟ್ಟೆ ದರೋಡೆ ಪ್ರಕರಣ: ಇಬ್ಬರ ಬಂಧನ

Update: 2018-03-27 22:38 IST

ಉಡುಪಿ, ಮಾ.27: ಮೂರು ತಿಂಗಳ ಹಿಂದೆ ಉಡುಪಿ ಜೋಡುಕಟ್ಟೆ ಎಂಬಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಉಡುಪಿ ಡಿಸಿಐಬಿ ಪೊಲೀಸರು ಇಂದು ಬಂಧಿಸಿದ್ದಾರೆ.

ಮೂಡುಬೆಳ್ಳೆಯ ಅಜಯ್ ಕುಮಾರ್ ಯಾನೆ ಅಣ್ಣು(30) ಹಾಗೂ ಕೊಂಡಕೂರು ಶಿವ ಪಂಚಾಕ್ಷರಿ ಭಜನಾ ಮಂದಿರದ ಬಳಿಯ ನಿವಾಸಿ ವಿಕ್ರಮ್ ಕುಂದರ್(23) ಬಂಧಿತ ಆರೋಪಿಗಳು. ದರೋಡೆ ಮಾಡಿದ್ದ ಹಣದಲ್ಲಿ ಖರೀದಿಸಿದ್ದ ಮೊಬೈಲನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಜ.18ರಂದು ರಾತ್ರಿ ವೇಳೆ ಜೋಡುಕಟ್ಟೆಯ ಸುಗಂಧ ವಿಹಾರ್ ಎಂಬ ಮನೆಗೆ ಅಕ್ರಮ ಪ್ರವೇಶ ಮಾಡಿದ ಇವರು ಮನೆಯಲ್ಲಿದ್ದ ಹೆಂಗಸರಿಗೆ ಹಲ್ಲೆ ನಡೆಸಿ ಚಿನ್ನಾಭರಣ ದರೋಡೆ ನಡೆಸಿದ್ದರು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ವಿಕ್ರಮ್ ಕುಂದರ್ ಈ ಹಿಂದೆ ಭಟ್ಕಳದಲ್ಲಿ ಕಳವು ಪ್ರಕರಣದ ಆರೋಪಿ ಯಾಗಿದ್ದು, ಮಣಿಪಾಲ ಠಾಣಾ ವ್ಯಾಪ್ತಿಯ ಹಯಗ್ರೀವ ನಗರ ಎಂಬಲ್ಲಿರುವ ಭಾಸ್ಕರ ಶೆಟ್ಟಿ ಎಂಬವರ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣದ ಆರೋಪಿ ಎಂದೂ ಪೊಲೀಸರು ತಿಳಿಸಿದ್ದಾರೆ.

ಉಡುಪಿ ಎಸ್ಪಿ ಲಕ್ಷ್ಮಣ ನಿಂಬರಗಿ ನಿರ್ದೇಶನದಲ್ಲಿ ಹೆಚ್ಚುವರಿ ಎಸ್ಪಿ ಕುಮಾರ ಚಂದ್ರ ಮತ್ತು ಡಿವೈಎಸ್ಪಿ ಟಿ.ಆರ್.ಜೈಶಂಕರ್ ಮಾರ್ಗದರ್ಶನದಲ್ಲಿ ಉಡುಪಿ ಡಿಸಿಐಬಿ ನಿರೀಕ್ಷಕ ಸಂಪತ್ ಕುಮಾರ್ ನೇತೃತ್ವದಲ್ಲಿ ಡಿಸಿಐಬಿ ಎಎಸ್ಸೈ ರವಿ ಚಂದ್ರ ಹಾಗೂ ಸಿಬ್ಬಂದಿಗಳಾದ ಸುರೇಶ, ಸಂತೋಷ ಕುಂದರ್, ಚಂದ್ರ ಶೆಟ್ಟಿ, ರಾಮು ಹೆಗ್ಡೆ, ರಾಘವೇಂದ್ರ ಉಪ್ಪುಂದ, ಪ್ರವೀಣ, ರಾಜ್ಕುಮಾರ್, ದಯಾನಂದ ಪ್ರಭು, ಶಿವಾನಂದ ಹಾಗೂ ಚಾಲಕ ರಾಘವೇಂದ್ರ ಈ ಕಾರ್ಯಾಚರಣೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News