×
Ad

ಹಾಸಿಗೆ ಹಿಡಿದ ಅಪ್ಪ,ಅಮ್ಮ; ಕುಟುಂಬದ ಹೊಣೆ ಹೊತ್ತ ಪುತ್ರಿ

Update: 2018-03-27 22:57 IST

ಹೆಬ್ರಿ, ಮಾ.27: ತಲೆಯ ಮೇಲೆ ಸಣ್ಣದೊಂದು ಸೂರು, ಮನೆಯೊಳಗೆ ಖಾಯಿಲೆಯಿಂದ ಹಾಸಿಗೆ ಹಿಡಿದಿರುವ ಅಪ್ಪ, ಅಮ್ಮ. ಕುಟುಂಬದ ಹೊಣೆ ಹೊತ್ತು ಬಸವಳಿದು ಸೋತು ಹೋಗಿರುವ ಏಕೈಕ ಮಗಳು. ಇದು ಕಾರ್ಕಳ ತಾಲೂಕು ಹಿರ್ಗಾನ ಗ್ರಾಪಂ ವ್ಯಾಪ್ತಿಯ ನೆಲ್ಲಿಕಟ್ಟೆ ಬ್ರಹ್ಮನಗರ ವಾಸಿ ತುಕ್ಕ ಪಾಣಾರ ಕುಟುಂಬದ ಕರುಣಾಜನಕ ಕಣ್ಣೀರ ಕಥೆ.

ತುಕ್ಕ ಪಾಣಾರ ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದಿದ್ದಾರೆ. ಮಗಳು ಗೀತಾ ಸುಮಾರು 2.50 ಲಕ್ಷ ರೂ. ಸಾಲ ಮಾಡಿ ತಂದೆಗೆ ಚಿಕಿತ್ಸೆ ಕೊಡಿಸಿದ್ದಾರೆ. ನಿರಂತರ ಚಿಕಿತ್ಸೆಯ ಬಳಿಕ ಈಗ ಎದ್ದು ಕುಳಿತುಕೊಳ್ಳುವ ತನಕ ತುಕ್ಕ ಪಾಣಾರ ಗುಣಮುಖರಾಗಿದ್ದಾರೆ. ತಿಂಗಳಿಗೆ 4ರಿಂದ 5 ಸಾವಿರ ರೂ. ಔಷಧಿಗಾಗಿ ಖರ್ಚು ಮಾಡಲೇಬೇಕಾಗಿದೆ.

ಈ ನಡುವೆ ತುಕ್ಕು ಪಾಣಾರ ಪತ್ನಿ ಸುಗುಣ ಅವರೂ ಮೆದುಳು ಗಡ್ಡೆ (ಬ್ರೈನ್ ಟ್ಯೂಮರ್) ಖಾಯಿಲೆಗೆ ತುತ್ತಾಗಿದ್ದು, ಅವರಿಗೂ ಲಕ್ಷಾಂತರ ರೂ. ಖರ್ಚಾ ಗಿದೆ. ಈಗ ಪ್ರತಿ ತಿಂಗಳು ಸಿಟಿ ಸ್ಕ್ಯಾನಿಂಗ್ ಸೇರಿ ಔಷಧಿಗೆ ತಿಂಗಳಿಗೆ 10 ಸಾವಿರ ರೂ. ತಗಲುತ್ತಿದೆ. ತುಕ್ಕ ಪಾಣಾರ-ಸುಗುಣ ದಂಪತಿಗಳ ಏಕೈಕ ಮಗಳು ಗೀತಾಗೆ ಅಪ್ಪಅಮ್ಮನ ಆರೈಕೆಯ ಜೊತೆಗೆ ಕುಟುಂಬದ ನಿರ್ವಹಣೆಯ ದೊಡ್ಡ ಹೊರೆ ತಲೆಮೇಲೆ ಬಿದ್ದಿದೆ.

ತನ್ನ ಪ್ರಾಯಕ್ಕೆ, ಅನುಭವಕ್ಕೆ ಕಷ್ಟ ಸಾಧ್ಯವಾದರೂ ಎಲ್ಲವನ್ನೂ ಮಗಳು ಗೀತಾ ನಿರ್ವಹಿಸುವ ಅನಿವಾರ್ಯ ಹೊಣೆ ಇವರ ಮೇಲಿದೆ. ಈ ನಡುವೆ ಕುಟುಂಬದ ಆಸರೆಯಾದ ಗೀತಾಳಿಗೆ ಮನೆ ಅಳಿಯನಾಗುವ ಹುಡುಗನ ಜೊತೆ ಮದುವೆ ನಿಶ್ಚಯವಾಗಿದ್ದು ಎ.18ರಂದು ಮದುವೆ ಕಾರ್ಯ ನಡೆಯಲಿದೆ. ಈಗಾಗಲೇ ಲಕ್ಷಾಂತರ ರೂ.ಸಾಲ ಮಾಡಿಕೊಂಡಿರುವ ಗೀತಾಳಿಗೆ ಯಾವುದೇ ಖರ್ಚು ಭರಿಸುವುದು ಅಸಾಧ್ಯದ ಮಾತೇ ಆಗಿದೆ. ಇವರ ಕುಟುಂಬದ ಕಷ್ಟಗಳಿಗೆ ನೆರವಾಗ ಬಯಸುವವರು ಗೀತಾ ಅವರ ಕರ್ನಾಟಕ ಬ್ಯಾಂಕ್ ಕಾರ್ಕಳ ಶಾಖೆಯ ಖಾತೆ ನಂಬ್ರ 4042500101765501ಕ್ಕೆ ಹಣಕಾಸಿನ ನೆರವು ನೀಡಬಹುದು. ಬ್ಯಾಂಕಿನ ಐಎಫ್‌ಎಸ್‌ಸಿ ಕೋಡ್ ಕೆಎಆರ್‌ಬಿ 0000404 ಮತ್ತು ಎಂಐಸಿಆರ್ ಕೋಡ್-575052027 ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News