ಕ್ರಿಕೆಟ್ ಆಸ್ಟ್ರೇಲಿಯ ಪ್ರಕಾರ ಚೆಂಡು ವಿರೂಪ ಷಡ್ಯಂತ್ರದ ರೂವಾರಿ ಸ್ಮಿತ್ ಅಲ್ಲ, ಈತ

Update: 2018-03-28 13:51 GMT

ಮೆಲ್ಬೋರ್ನ್, ಮಾ.27: ದಕ್ಷಿಣ ಆಫ್ರಿಕ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ ನಡೆದಿರುವ ಚೆಂಡು ವಿರೂಪ ಯೋಜನೆಯ ರೂವಾರಿ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಎಂದು ಕ್ರಿಕೆಟ್ ಆಸ್ಟ್ರೇಲಿಯ(ಸಿಎ)ಬಹಿರಂಗಪಡಿಸಿದೆ.

ಚೆಂಡು ವಿರೂಪ ವಿವಾದದಲ್ಲಿ ಭಾಗಿಯಾದ ಆರೋಪದಲ್ಲಿ ಅಂತಾರಾಷ್ಟ್ರೀಯ ಹಾಗೂ ದೇಶೀಯ ಕ್ರಿಕೆಟ್‌ನಿಂದ ಒಂದು ವರ್ಷ ಕಾಲ ನಿಷೇಧಕ್ಕೆ ಒಳಗಾಗಿರುವ ವಾರ್ನರ್ ಅವರು ತಂಡದ ಕಿರಿಯ ಸದಸ್ಯ ಕ್ಯಾಮರೂನ್ ಬ್ಯಾಂಕ್ರಾಫ್ಟ್‌ಗೆ ತಾನು ರೂಪಿಸಿದ ಷಡ್ಯಂತ್ರವನ್ನು ಹೇಗೆ ಜಾರಿಗೊಳಿಸಬಹುದೆಂದು ಹೇಳಿಕೊಟ್ಟಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯ ತಿಳಿಸಿದೆ.

ಈತನಕ ಆಸ್ಟ್ರೇಲಿಯ ನಾಯಕ ಸ್ಟೀವ್ ಸ್ಮಿತ್ ಚೆಂಡು ವಿರೂಪದ ಮಾಸ್ಟರ್‌ಮೈಂಡ್ ಎಂದು ನಂಬಲಾಗಿತ್ತು. ಘಟನೆ ನಡೆದ ತಕ್ಷಣ ಸ್ಮಿತ್ ತಪ್ಪು ಒಪ್ಪಿಕೊಂಡು ಅಚ್ಚರಿ ಮೂಡಿಸಿದ್ದರು.

ಚೆಂಡು ವಿರೂಪಗೊಳಿಸಲು ಬ್ಯಾಂಕ್ರಾಫ್ಟ್ ಹೇಳುವಂತೆ ಹಳದಿ ಟೇಪ್‌ನ್ನು ಬಳಸಲಾಗಿಲ್ಲ. ಅದರ ಬದಲಿಗೆ ಸ್ಯಾಂಡ್ ಪೇಪರ್ ಬಳಸಲಾಗಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ. ಷಡ್ಯಂತ್ರದಲ್ಲಿ ತಾನು ಭಾಗಿಯಾಗಿಲ್ಲ ಎಂದು ಬಿಂಬಿಸುವ ಮೂಲಕ 3ನೇ ಟೆಸ್ಟ್‌ನಲ್ಲಿ ಕಾರ್ಯನಿರ್ವಹಿಸಿದ್ದ ಅಂಪೈರ್‌ಗಳನ್ನು ವಾರ್ನರ್ ದಾರಿ ತಪ್ಪಿಸಿದ್ದರು ಎಂದು ಗೊತ್ತಾಗಿದೆ.

ಷಡ್ಯಂತ್ರದ ಅರಿವಿದ್ದರೂ ಇದನ್ನು ತಪ್ಪಿಸಲು ಯತ್ನಿಸದ ಸ್ಮಿತ್‌ಗೆ ನಿಷೇಧ ಹೇರಲಾಗಿದೆ.

ತನ್ನ ಪ್ಯಾಂಟಿನೊಳಗೆ ಸ್ಯಾಂಡ್‌ಪೇಪರ್ ಅಡಗಿಸಿಕೊಟ್ಟುಕೊಳ್ಳುವಂತೆ ಬ್ಯಾಂಕ್ರಾಫ್ಟ್‌ಗೆ ಸ್ಮಿತ್ ಸೂಚನೆ ನೀಡಿದ್ದಾರೆಂದು ಸಿಎ ತನಿಖೆಯಲ್ಲಿ ಬಹಿರಂಗವಾಗಿದೆ. ಬ್ಯಾಂಕ್ರಾಫ್ಟ್ ಚೆಂಡು ವಿರೂಪಗೊಳಿಸಲು ಪ್ರಯತ್ನಿಸಿದ್ದಕ್ಕೆ ಸಂಬಂಧಿಸಿ ಸ್ಮಿತ್ ಅಂಪೈರ್‌ಗಳನ್ನು ಮೋಸಗೊಳಿಸಿದ್ದರು.

ಕೇಪ್‌ಟೌನ್ ಟೆಸ್ಟ್‌ನಲ್ಲಿ ಆಡಿದ ಕಿರಿಯ ಆಟಗಾರರಾಗಿರುವ ಬ್ಯಾಂಕ್ರಾಫ್ಟ್ ಅವರು ವಾರ್ನರ್ ಸೂಚನೆ ಹಾಗೂ ಸ್ಮಿತ್‌ರ ನಿರ್ದೇಶನವನ್ನು ಪಾಲಿಸಿದ್ದಕ್ಕೆ, ಪಂದ್ಯದ ಅಧಿಕಾರಿಗಳು ಹಾಗೂ ಸಾರ್ವಜನಿಕರಿಗೆ ಸುಳ್ಳುಹೇಳಿದ್ದಕ್ಕೆ ಅವರ ಮೇಲೆ ದೂರು ದಾಖಲಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News