ಕೊಯ್ಯೂರಿನಲ್ಲಿ ನಡೆದ ಕೊಲೆ ಪ್ರಕರಣ: ಅಪರಾಧಿಗೆ ಜೀವಾವಧಿ ಶಿಕ್ಷೆ

Update: 2018-03-28 14:17 GMT

ಮಂಗಳೂರು, ಮಾ. 28: ಬೆಳ್ತಂಗಡಿ ತಾಲೂಕಿನ ಕೊಯ್ಯೂರಿನ ಬಜೆ ಗ್ರಾಮದಲ್ಲಿ ಎರಡು ವರ್ಷಗಳ ಹಿಂದೆ ನಡೆದ ಬಂಟ್ವಾಳದ ಪದ್ಮನಾಭ ಪೂಜಾರಿ (51) ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನ 4ನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಅಪರಾಧಿಗೆ ಜೀವಾವಧಿ ಶಿಕ್ಷೆ ಮತ್ತು 15,000 ರೂ. ದಂಡ ವಿಧಿಸಿ ಬುಧವಾರ ತೀರ್ಪು ನೀಡಿದೆ. 

ಕೊಯ್ಯೂರಿನ ಸಂಜೀವ ಪೂಜಾರಿ (47) ಎಂಬಾತ ಜೀವಾವಧಿ ಶಿಕ್ಷೆಗೊಳಗಾದ ಅಪರಾಧಿ ಎಂದು ಗುರುತಿಸಲಾಗಿದೆ.

ಪ್ರಕರಣದ ಹಿನ್ನೆಲೆ: 2016ರ ಎ.3ರಂದು ರಾತ್ರಿ ಕೊಯ್ಯೂರಿನ ಬಜೆ ಗ್ರಾಮದ ಬಾಲಕೃಷ್ಣ ಪೂಜಾರಿ ಅವರ ತೋಟದಲ್ಲಿ ಕೆಲಸ ಮಾಡುತ್ತಿದ್ದ ಪದ್ಮನಾಭ ಪೂಜಾರಿ ಅವರನ್ನು ಸಂಜೀವ ಪೂಜಾರಿ ಮಾರಕಾಯುಧದಿಂದ ಕುತ್ತಿಗೆಗೆ ಕಡಿದು ಕೊಲೆ ಮಾಡಿದ್ದ ಎಂದು ಆರೋಪಿಸಲಾಗಿತ್ತು. ಕೊಲೆ ನಡೆದ ಮರು ದಿನ ಆರೋಪಿ ಸಂಜೀವ ಪೂಜಾರಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದರು.

ಆರೋಪಿ ಎರಡು ಮದುವೆಯಾಗಿದ್ದು, ಇಬ್ಬರು ಪತ್ನಿಯರು ಹಾಗೂ ಮಕ್ಕಳು ಈತನ ಹಿಂಸೆಯನ್ನು ತಾಳಲಾರದೆ ಪತಿಯನ್ನು ತ್ಯಜಿಸಿದ್ದಾರೆ.

ಕೊಲೆಗೆ ಕಾರಣವೇನು?

‘‘ನೀನು ಇಲ್ಲಿ ಕೆಲಸ ಮಾಡಬಾರದು. ಈ ದಾರಿಯಲ್ಲಿ ಹೋಗಬಾರದು’’ ಎಂದು ಪದ್ಮನಾಭ ಪೂಜಾರಿ ಅವರಿಗೆ ಸಂಜೀವ ಪೂಜಾರಿ ಆಗಾಗ ಬೆದರಿಕೆ ಹಾಕುತ್ತಿದ್ದನೆಂದು ಆರೋಪಿಸಲಾಗಿತ್ತು. ಆದರೆ ಪದ್ಮನಾಭ ಪೂಜಾರಿ ಇದನ್ನು ಲೆಕ್ಕಿಸದೇ ಅದೇ ಮಾರ್ಗವಾಗಿ ಹೋಗುತ್ತಿದ್ದರು. ಇದಕ್ಕಾಗಿ ಆಗಾಗ ಅವರ ನಡುವೆ ಮಾತಿನ ಚಕಮಕಿ ನಡೆಯುತ್ತಿತ್ತು. ಇದೇ ದ್ವೇಷದಿಂದ ಕಾದು ಕುಳಿತು ಪದ್ಮನಾಭ ಪೂಜಾರಿ ಅವರನ್ನು ಸಂಜೀವ ಪೂಜಾರಿ ಕೊಲೆ ಮಾಡಿದ್ದನು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆಗಿದ್ದ ಬಿ.ಆರ್.ಲಿಂಗಪ್ಪ ಅವರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು. ಅವರ ವರ್ಗಾವಣೆಯ ಬಳಿಕ ಇನ್ಸ್‌ಪೆಕ್ಟರ್ ನೇಮಿರಾಜ್ ಅವರು ತನಿಖೆಯನ್ನು ಮುಂದುವರಿಸಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಲಯದ ನ್ಯಾಯಾಧೀಶರಾದ ನೇರಳೆ ವೀರ ಭದ್ರ ಭವಾನಿ ಅವರು ಆರೋಪಿಯ ಮೇಲಿನ ಆರೋಪ ಸಾಬೀತಾಗಿದೆ ಎಂಬ ತೀರ್ಮಾನಕ್ಕೆ ಬಂದು ಆರೋಪಿಗೆ ಐಪಿಸಿ ಸೆಕ್ಷನ್ 302 ಅನ್ವಯ ಜೀವಾವಧಿ ಶಿಕ್ಷೆ ಮತ್ತು 15,000 ರೂ. ದಂಡ ವಿಧಿಸಿ ಬುಧವಾರ ತೀರ್ಪು ನೀಡಿದ್ದಾರೆ.

ದಂಡ ಮೊತ್ತದಲ್ಲಿ 10,000 ರೂ.ಗಳನ್ನು ಕೊಲೆಯಾದ ಪದ್ಮನಾಭ ಪೂಜಾರಿ ಅವರ ಪತ್ನಿಗೆ ಪರಿಹಾರವಾಗಿ ನೀಡಬೇಕೆಂದು ಆದೇಶಿದ್ದಾರೆ. ಅಲ್ಲದೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಅರ್ಜಿ ಹಾಕಿ ಹೆಚ್ಚುವರಿ ಪರಿಹಾರವನ್ನು ಪಡೆಯಬಹುದೆಂದು ಅವರು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು 16 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಪ್ರತ್ಯಕ್ಷ ಸಾಕ್ಷಿಗಳು ಇದ್ದುದರಿಂದ ಆರೋಪಿಗೆ ಶಿಕ್ಷೆಯಾಗಲು ಸಹಕಾರಿಯಾಗಿದೆ. ಪಬ್ಲಿಕ್ ಪ್ರಾಸಿಕ್ಯೂಟರ್ ಹರಿಶ್ಚಂದ್ರ ಸರಕಾರದ ಪರವಾಗಿ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News