×
Ad

ದೇವೇಗೌಡರು ಒಳ್ಳೆಯವರು, ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಳ್ಳಬೇಕು: ಮಮತಾ

Update: 2018-03-28 19:45 IST

ಹೊಸದಿಲ್ಲಿ, ಮಾ.28: ಕರ್ನಾಟಕದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜೆಡಿಎಸ್ ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ಮಾತಿನ ದಾಳಿಯನ್ನು ವಿರೋಧಿಸಿರುವ ತೃಣಮೂಲ ಕಾಂಗ್ರೆಸ್ ಮುಖ್ಯಸ್ತೆ ಮಮತಾ ಬ್ಯಾನರ್ಜಿ, ಹಿರಿಯ ರಾಜಕೀಯ ಪಕ್ಷವಾದ ಕಾಂಗ್ರೆಸ್ ಬಿಜೆಪಿ ವಿರುದ್ಧದ ಹೋರಾಟದಲ್ಲಿ ಇತರ ಪಕ್ಷಗಳನ್ನೂ ಜೊತೆಗೇ ಕೊಂಡೊಯ್ಯಬೇಕಿದೆ ಎಂದು ಹೇಳಿದ್ದಾರೆ.

ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಒಳ್ಳೆಯ ವ್ಯಕ್ತಿ ಎಂದು ಬಣ್ಣಿಸಿರುವ ಮಮತಾ, 1996ರಲ್ಲಿ ದೇವೇಗೌಡರು ಪ್ರಧಾನಿಯಾಗಿದ್ದ ವೇಳೆ ಕಾಂಗ್ರೆಸ್ ಅವರನ್ನು ಬೆಂಬಲಿಸಿತ್ತು ಎಂಬುದನ್ನು ನೆನಪಿಸಿದ್ದಾರೆ.

  ಕರ್ನಾಟಕದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮಧ್ಯೆ ಸಾಮರಸ್ಯ ಇರಬೇಕೆಂಬುದು ತನ್ನ ಆಶಯವಾಗಿದೆ. ಆದರೆ ಅಲ್ಲಿಯ ಪರಿಸ್ಥಿತಿ ವಿಭಿನ್ನವಾಗಿದೆ. ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಳ್ಳುವ ಅಗತ್ಯವಿದೆ. ಹೀಗೇ ಮಾಡಬೇಕು ಎಂದು ಕಾಂಗ್ರೆಸ್‌ಗೆ ನಾವು ಹೇಳುವಂತಿಲ್ಲ. ಯಾಕೆಂದರೆ ಅದು ಅವರ ವಿಶೇಷಾಧಿಕಾರ. ಜನಸಾಮಾನ್ಯರ ನೆಲೆಯಲ್ಲಿ ನನ್ನ ಅಭಿಪ್ರಾಯ ಕೇಳಿದರೆ, ಎರಡೂ ಪಕ್ಷಗಳು ಒಟ್ಟಿಗೆ ಸಾಗಬೇಕು ಎಂದು ಹೇಳುತ್ತೇನೆ ಎಂದು ಮಮತಾ ಹೇಳಿದರು. ಕರ್ನಾಟಕದಲ್ಲಿ ಇತರ ವಿಪಕ್ಷ ಮುಖ್ಯಮಂತ್ರಿಗಳ ಜತೆ ಸೇರಿ ಚುನಾವಣಾ ಪ್ರಚಾರ ನಡೆಸುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು. ಪ್ರಚಾರ ಕಾರ್ಯ ಎರಡೂ ಪಕ್ಷಗಳು ಪರಸ್ಪರ ಹೊಂದಿರುವ ಸಂಬಂಧವನ್ನು ಆಧರಿಸಿದೆ. ತ್ರಿಪುರಾದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲು ನಾವು ಬಯಸಿದ್ದೆವು. ಆದರೆ ಕಾಂಗ್ರೆಸ್ ಧೋರಣೆ ವಿಭಿನ್ನವಾಗಿತ್ತು. ತನಗೆ ಬಯಸಿದ್ದನ್ನು ಮಾಡುವುದು ಕಾಂಗ್ರೆಸ್‌ನ ಪರಮಾಧಿಕಾರವಾಗಿದೆ ಎಂದು ಮಮತಾ ಹೇಳಿದರು. ಮಮತಾ ಬಿಜೆಪಿ ವಿರುದ್ಧ ಹೋರಾಟ ನಡೆಸಲು ತೃತೀಯ ರಂಗವೊಂದನ್ನು ರಚಿಸುವ ಪ್ರಯತ್ನ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News