ಎಸ್‌ಸಿ/ಎಸ್‌ಟಿ ಕೆನೆಪದರವನ್ನು ಮೀಸಲಾತಿಯಿಂದ ಹೊರಗಿಡುವುದಕ್ಕೆ ಕೇಂದ್ರ ಸರಕಾರದ ವಿರೋಧ
ಹೊಸದಿಲ್ಲಿ,ಮಾ.28: ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ವರ್ಗದಲ್ಲಿ ಕೆನೆ ಪದರ ಪರಿಕಲ್ಪನೆಯನ್ನು ಕೇಂದ್ರವು ಬುಧವಾರ ವಿರೋಧಿಸಿದೆ.
ಎಸ್‌ಸಿ/ಎಸ್‌ಟಿ ಗುಂಪುಗಳಿಗೆ ಮೀಸಲಾತಿ ಕುರಿತು ರಾಷ್ಟ್ರಪತಿಗಳ ಆದೇಶಕ್ಕೆ ಕೆನೆಪದರ ನೀತಿಯನ್ನು ಅನ್ವಯಿಸುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ನೇತೃತ್ವದ ಪೀಠಕ್ಕೆ ಸರಕಾರವು ತಿಳಿಸಿತು.
ಎಸ್‌ಸಿ/ಎಸ್‌ಟಿ ಸಮುದಾಯದ ಸ್ಥಿತಿವಂತ ವ್ಯಕ್ತಿಗಳು ಅಥವಾ ಕೆನೆಪದರಕ್ಕೆ ಸೇರಿದವರನ್ನು ಮೀಸಲಾತಿಯ ಸೌಲಭ್ಯಗಳನ್ನು ಪಡೆದುಕೊಳ್ಳುವುದರಿಂದ ಹೊರಗಿಡುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಪೀಠವು ನಡೆಸುತ್ತಿದೆ.
ಮಂಡಲ್ ತೀರ್ಪು ಕೆನೆಪದರವನ್ನು ಮೀಸಲಾತಿಯ ಸೌಲಭ್ಯಗಳಿಂದ ಹೊರಗಿರಿಸುವುದನ್ನು ಇತರ ಹಿಂದುಳಿದ ಜಾತಿಗಳಿಗೆ ಮಾತ್ರ ಸೀಮಿತಗೊಳಿಸಿದ್ದು, ಎಸ್‌ಸಿ/ಎಸ್‌ಟಿಗಳಲ್ಲಿಯ ಕೆನೆಪದರಕ್ಕೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಅವರನ್ನೂ ಮೀಸಲಾತಿ ಸೌಲಭ್ಯಗಳಿಂದ ಹೊರಗಿಡಬೇಕೆಂದು ಈಗ ಈ ಅರ್ಜಿಯು ಕೋರಿದೆ.
ಎಸ್‌ಸಿ/ಎಸ್‌ಟಿಗಳಿಗೆ ಸಿಗಬೇಕಾದ ಸೌಲಭ್ಯಗಳನ್ನು ದುರ್ಬಲಗೊಳಿಸುವ ಯಾವುದೇ ಕೆಲಸವನ್ನು ಸರಕಾರವು ಮಾಡುವುದಿಲ್ಲ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿ.ಎಸ್.ನರಸಿಂಹ ಅವರು ತಿಳಿಸಿದರು.
ಈ ವಿಷಯದಲ್ಲಿ ಸ್ಪಷ್ಟವಾದ ಪ್ರಮಾಣಪತ್ರವೊಂದನ್ನು ಸಲ್ಲಿಸುವಂತೆ ಪೀಠವು ಸರಕಾರಕ್ಕೆ ಸೂಚಿಸಿತು.
ರಾಜಸ್ಥಾನದಲ್ಲಿಯ ಎಸ್‌ಸಿ/ಎಸ್‌ಟಿ ಸಮುದಾಯದ ಬಡ ಮತ್ತು ಶೋಷಿತ ವರ್ಗಗಳನ್ನು ಪ್ರತಿನಿಧಿಸುತ್ತಿರುವ ಸಮತಾ ಆಂದೋಲನ ಸಮಿತಿಯು, ಈ ಸಮುದಾಯಗಳಲ್ಲಿನ ಶ್ರೀಮಂತರು ಮೀಸಲಾತಿಯ ಸಂಪೂರ್ಣ ಲಾಭಗಳನ್ನು ಕಬಳಿಸುತ್ತಿದ್ದಾರೆ ಮತ್ತು ಅರ್ಹರು ಹಾಗೂ ಬಡವರು ಮಣ್ಣು ಮುಕ್ಕುವುದು ಮುಂದುವರಿದಿದೆ ಎಂದು ತನ್ನ ಅರ್ಜಿಯಲ್ಲಿ ವಾದಿಸಿದೆ.