ಅಧ್ಯಯನಕ್ಕಿಂತ ಬುಡಕಟ್ಟು ಸಮುದಾಯದೊಂದಿಗೆ ಬೆರೆಯುವುದು ಮುಖ್ಯ: ಟಾಕಪ್ಪ ಕಣ್ಣೂರು

Update: 2018-03-28 14:29 GMT

ಉಡುಪಿ, ಮಾ.28: ಬುಡಕಟ್ಟು ಸಮುದಾಯಗಳ ಕುರಿತು ಅಧ್ಯಯನ, ಪುಸ್ತಕ ಬರೆದರೆ ಸಾಲದು. ಅಸ್ಪಶ್ಯರಾಗಿ ಈ ಸಮಾಜದಿಂದ ದೂರ ಉಳಿದಿರುವ ಅವರನ್ನು ನಮ್ಮಂದಿಗೆ ಸೇರಿಸಿಕೊಳ್ಳುವ ಕೆಲಸ ಮಾಡಬೇಕು ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಬಿ.ಟಾಕಪ್ಪ ಕಣ್ಣೂರು ಹೇಳಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಜಾನಪದ ಅಕಾಡೆಮಿ, ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಮಣಿಪಾಲ ಅಕಾ ಡೆಮಿ ಆಫ್ ಹೈಯರ್ ಎಜುಕೇಶನ್, ಎಂಜಿಎಂ ಕಾಲೇಜುಗಳ ಸಹಯೋಗ ದಲ್ಲಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಬುಧವಾರ ಆಯೋಜಿಸಲಾದ ಕರ್ನಾಟಕ ಜಾನಪದ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತ, ಡೋಲು ಕಲಾವಿದ ಶತಾಯುಷಿ ಗುರುವ ಕೊರಗ ಜನ್ಮ ಶತಮಾನೋತ್ಸವ ಸಂಭ್ರಮ- ಸಮಾವೇಶದಲ್ಲಿ ಅವರು ಮಾತನಾಡುತಿದ್ದರು.

ಬುಡಕಟ್ಟು ಸಮುದಾಯಗಳನ್ನು ನಮ್ಮಂದಿಗೆ ಸೇರಿಸಿಕೊಳ್ಳುವ ಪ್ರಯತ್ನವನ್ನು ನಾವು ಮಾಡುತ್ತಿಲ್ಲ. ಅವರನ್ನು ಸೇರಿಸಿಕೊಳ್ಳುವ ಕಲ್ಪನೆ ಇಂದು ಕೂಡ ಸರಿ ಯಾಗಿ ಮೂಡಿಲ್ಲ. ಆದುದರಿಂದ ನಾವೆಲ್ಲ ಅವರೊಂದಿಗೆ ಮುಕ್ತವಾಗಿ ಸೇರ ಬೇಕು. ಇಲ್ಲದಿದ್ದರೆ ಬುಡಕಟ್ಟು ಸಮುದಾಯಗಳೇ ಅಳಿಸಿಹೋಗುವ ಸಾಧ್ಯತೆ ಗಳಿವೆ ಎಂದು ಅವರು ತಿಳಿಸಿದರು.

ಅಕಾಡಮಿಯ ಸದಸ್ಯ ಸಂಚಾಲಕ ಹಾಗೂ ಜಾನಪದ ವಿದ್ವಾಂಸ ಪ್ರೊ.ಎಸ್. ಎ.ಕೃಷ್ಣಯ್ಯ ಮಾತನಾಡಿ, ಅಸ್ಪಶ್ಯತೆ ಕಾರಣಕ್ಕಾಗಿ ಕೊರಗ ಸಮುದಾಯ ವನ್ನು ಸಮಾಜದಿಂದ ದೂರ ಇಡಲಾಗಿದೆ. ವೈವಿಧ್ಯತೆಯಿಂದ ಕೂಡಿರುವ ಅವರ ಭಾಷೆ ನೆಲೆ ಕಚ್ಚಿ ನಾಶವಾಗುತ್ತಿದೆ. ಭಾಷೆ ನಾಶವಾದರೆ ಸಂಸ್ಕೃತಿ ಕೂಡ ನಾಶವಾಗಿ ಇಡೀ ಸಮುದಾಯವೇ ಕಣ್ಮರೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೊರಗ ಸಮುದಾಯದಲ್ಲಿ ರಾಷ್ಟ್ರೀಯ ಇತಿಹಾಸ ಕಟ್ಟುವಷ್ಟು ಮಾಹಿತಿ ಇದೆ. ಆದುದರಿಂದ ಬಡಕಟ್ಟು ಸಮುದಾಯಗಳು ಇರುವಲ್ಲಿ ಥೀಮ್ ಪಾರ್ಕ್‌ಗಳನ್ನು ಮಾಡಬೇಕು. ಇದರಿಂದ ಕೊಡುಕೊಳ್ಳುವಿಕೆ ಸಂಸ್ಕೃತಿ ಬೆಳೆಯಲು ಸಾಧ್ಯವಾಗು ತ್ತದೆ. ಗೋಮಾಳ ಪ್ರದೇಶಗಳು ಗೋವಳರಾಗಿರುವ ಕೊರಗರದ್ದು, ಅದನ್ನು ಅವರಿಗೆ ನೀಡುವ ಬಗ್ಗೆ ಚಿಂತನೆ ಮಾಡಬೇಕು ಎಂದು ಅವರು ತಿಳಿಸಿದರು.

ಸಮಾವೇಶವನ್ನು ಮಣಿಪಾಲ ಮಾಹೆಯ ಸಹಕುಲಾಧಿಪತಿ ಡಾ.ಎಚ್. ಎಸ್.ಬಲ್ಲಾಳ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್ ವಹಿಸಿದ್ದರು. ಮುಖ್ಯ ಅತಿಥಿ ಗಳಾಗಿ ಭಾಷಾ ತಜ್ಞ ಡಾ.ಯು.ಪಿ.ಉಪಾಧ್ಯಾಯ, ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪೂರ್ಣಿಮಾ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶತಾಯುಷಿ ಗುರುವ ಕೊರಗ ಅವರನ್ನು ಸನ್ಮಾನಿಸ ಲಾಯಿತು. ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದ ಸಂಯೋಜಕ ಪ್ರೊ.ವರದೇಶ ಹಿರೇಗಂಗೆ ಸ್ವಾಗತಿಸಿದರು. ಅಕಾಡೆಮಿ ರಿಜಿಸ್ಟ್ರಾರ್ ಸಿದ್ರಾಮ್ ಸಿಂಧೆ ವಂದಿಸಿದರು. ಶರಿತಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

ದೇವಸ್ಥಾನಕ್ಕೆ ಹೋಗದ ಗುರುವ ಕೊರಗ

ಕೊರಗ ಪರಂಪರೆಯ ವಾದ್ಯ ‘ಕಡ್ಡಾಯಿ’(ಡೋಲು) ನುಡಿಸುವುದರ ಮೂಲಕ ಜನಪದ ಸಂಸ್ಕೃತಿಯ ಅನನ್ಯತೆಯನ್ನು ಪರಿಚಯಿಸುತ್ತಿರುವ ಕಲಾವಿದ ಹಿರಿಯಡ್ಕ ಗುಡ್ಡೆಅಂಗಡಿಯ 102 ವಯಸ್ಸಿನ ಗುರುವ ಕೊರಗ, ಒಮ್ಮೇಯೂ ದೇವಸ್ಥಾನಕ್ಕೆ ಹೋಗಿಲ್ಲ.

‘ನಾನು ಈವರೆಗೆ ದೇವಸ್ಥಾನಕ್ಕೆ ಹೋಗಿಲ್ಲ. ಅಲ್ಲಿಗೆ ಹೋಗುವಾಗ ಮನಸ್ಸೇ ನನ್ನನ್ನು ತಡೆಯುತ್ತದೆ. ದೇವರು ಇಲ್ಲಿಯೇ ಇದ್ದಾನೆ ಎಂದು ಹೇಳುತ್ತದೆ. ಹೀಗಾಗಿ ನನಗೆ ಬೇಕೆಂದಾಗ ನಾನು ದೇವರನ್ನು ಕಾಣುತ್ತಿದ್ದೇನೆ. ದುಡಿಮೆಯೇ ನನ್ನ ದೇವರು’ ಎಂದು ಗುರುವ ಕೊರಗ ಹೇಳುತ್ತಾರೆ. 12ನೆ ವಯಸ್ಸಿನಿಂದಲೂ ಡೋಲು ಬಾರಿಸುವುದು ಮತ್ತು ಬುಟ್ಟಿ ಹೆಣೆಯುವ ಕಾಯಕದಲ್ಲಿ ತೊಡಗಿಸಿಕೊಂಡಿರುವ ಇವರು 2017ನೆ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News