ಕೊರಗರ ಕೊಪ್ಪದೊಳಗಿನ ಕುಲಕಸುಬು ಪ್ರಾತ್ಯಕ್ಷಿಕೆ-ದಾಖಲೀಕರಣ

Update: 2018-03-28 14:32 GMT

ಉಡುಪಿ, ಮಾ.28: ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಬುಧವಾರ ಆಯೋಜಿಸಲಾದ ಡೋಲು ಕಲಾವಿದ ಶತಾಯುಷಿ ಗುರುವ ಕೊರಗ ಜನ್ಮ ಶತಮಾನೋತ್ಸವ ಸಂಭ್ರಮ- ಸಮಾವೇಶದದಲ್ಲಿ ಕೊರಗರ ಕೊಪ್ಪದೊಳಗಿನ ಕುಲ ಕಸುಬು ಮತ್ತು ಸಂಪ್ರದಾಯ ಪ್ರಾತ್ಯಕ್ಷಿಕೆ ಮತ್ತು ದಾಖಲೀಕರಣವನ್ನು ನಡೆಸಲಾಯಿತು.

ಕಲಾ ಪ್ರದರ್ಶನ ಕಾರ್ಯಕ್ರಮವನ್ನು ಮಣಿಪಾಲ ಅಕಾಡೆಮಿ ಆಫ್ ಜನ ರಲ್ ಎಜುಕೇಶನ್‌ನ ಆಡಳಿತಾಧಿಕಾರಿ ಡಾ.ಎಚ್.ಶಾಂತರಾಮ್ ಉದ್ಘಾಟಿಸಿ ದರು. ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಬಿ.ಟಾಕಪ್ಪ ಕಣ್ಣೂರು, ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಡಾ.ಸಂಧ್ಯಾ ಆರ್.ನಂಬಿಯಾರ್, ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದ ಸಂಯೋಜಕ ಪ್ರೊ.ವರದೇಶ ಹಿರೇಗಂಗೆ, ಅಕಾಡೆಮಿ ರಿಜಿಸ್ಟ್ರಾರ್ ಸಿದ್ರಾಮ್ ಸಿಂಧೆ, ಸದಸ್ಯ ಸಂಚಾಲಕ ಪ್ರೊ.ಎಸ್.ಎ.ಕೃಷ್ಣಯ್ಯ ಉಪಸ್ಥಿತರಿದ್ದರು.

ಕಲಾ ಪ್ರದರ್ಶನದಲ್ಲಿ ಕೊರಗರ ಡೋಲು ತಂಡಗಳಾದ ಅಂಬಲಪಾಡಿಯ ಕಪ್ಪೆಟ್ಟು ರವಿಚಂದ್ರ ತಂಡ, ಶಿರ್ವ ಬಾಬು ಪಾಂಗಾಳ ತಂಡ, ಹಿರಿಯಡ್ಕ ಗುರುವ ಕೊರಗ ತಂಡ, ಕುಂದಾಪುರ ಗಣೇಶ್ ವಿ.ಕೊರಗ ತಂಡಗಳು ಡೋಲು ಬಾರಿಸುತ್ತ ಕೊಳಲು ಊದುತ್ತ ಕುಣಿತವನ್ನು ಪ್ರದರ್ಶಿದವು.

ಜನಪದ ಕಲಾತಂಡಗಳಾದ ಶಿವಮೊಗ್ಗ ಜಿಲ್ಲೆಯ ಸಾಗರದ ಟೀಕಪ್ಪ ಮತ್ತು ತಂಡದಿಂದ ಡೊಳ್ಳು ಕುಣಿತ, ಜೀವನ್ ಪ್ರಕಾಶ್ ಮಾರ್ಗದರ್ಶನದಲ್ಲಿ ಕಂಗಿಲು ಕುಣಿತ, ಚಿಕ್ಕಮಗಳೂರು ಪಲ್ಲವಿ ಮತ್ತು ತಂಡದಿಂದ ಮಹಿಳಾ ವೀರಗಾಸೆ, ಕಾರವಾರ ಲಿಲ್ಲಿ ಮತ್ತು ತಂಡದಿಂದ ಸಿದ್ದಿ ಡಮಾಮಿ ನೃತ್ಯ, ಶಿವಮೊಗ್ಗದ ಸಂಕಯ್ಯ ಮತ್ತು ತಂಡದಿಂದ ಗೊಂಡರ ಢಕ್ಕೆ ಕುಣಿತ ಪ್ರದರ್ಶಿನಗೊಂಡಿತು.

ಇದಕ್ಕೂ ಮುನ್ನ ಕೊರಗ ಸಮುದಾಯದ ಸ್ಥಿತಿಗತಿ ಚಿತ್ರಣ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಭಾಷಾ ತಜ್ಞ ಡಾ.ಯು.ಪಿ.ಉಪಾಧ್ಯಾಯ ಮಾತನಾಡಿ, ಕೊರಗ ಸಮುದಾಯ ಹಾಗೂ ಅವರ ಭಾಷೆಗಳ ಬಗ್ಗೆ ಸಂಶೋಧನೆಗಳು ನಡೆಯಬೇಕಾಗಿವೆ. ಈ ವಿಚಾರದಲ್ಲಿ ಸಂಶೋಧಕರ ಮುಂದೆ ಸಾಕಷ್ಟು ಸವಾಲು ಗಳಿವೆ. ಮಾನವ ಶಾಸ್ತ್ರ ಹಾಗೂ ಭಾಷಾ ಶಾಸ್ತ್ರಗಳ ಕುರಿತು ಅಧ್ಯಯನಕ್ಕೆ ಸಂಶೋಧಕರು ಮುಂದಾಗಬೇಕು ಎಂದರು.

ಸಂವಾದದಲ್ಲಿ ಕಲಾವಿದ ಬಾಬು ಪಾಂಗಾಳ, ಸಂಶೋಧಕ ಉನ್ನಿಕೃಷ್ಣನ್, ಮುದ್ದು ಮೂಡುಬೆಳ್ಳೆ, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ವೈ.ಎನ್.ಶೆಟ್ಟಿ ಮೊದಲಾದವರು ಪಾಲ್ಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News