ಆಂಧ್ರ ಸದನದಲ್ಲಿ ಪ್ರಧಾನಿಯ ಭಾಷಣಗಳ ಬಂಡವಾಳ ಬಯಲು ಮಾಡಿದ ನಾಯ್ಡು

Update: 2018-03-28 16:26 GMT

ಹೈದರಾಬಾದ್, ಮಾ.28: ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲು ನಿರಾಕರಿಸಿರುವ ಕೇಂದ್ರ ಸರಕಾರದ ವಿರುದ್ಧ ಮುನಿಸಿಕೊಂಡಿರುವ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಬುಧವಾರದಂದು ಪ್ರಧಾನಿ ಮೋದಿ ಚುನಾವಣೆಗೆ ಮುನ್ನ ಹಾಗೂ ನಂತರ ಮಾಡಿರುವ ಭಾಷಣಗಳ ತುಣುಕುಗಳನ್ನು ರಾಜ್ಯ ವಿಧಾನಸಭೆಯಲ್ಲಿ ವಿಶೇಷವಾಗಿ ಅಳವಡಿಸಲಾಗಿದ್ದ ದೊಡ್ಡ ಪರದೆಯ ಮೇಲೆ ಪ್ರದರ್ಶಿಸಿದರು. ಆಮೂಲಕ ಕೇಂದ್ರ ಸರಕಾರ ಮತ್ತು ಪ್ರಧಾನಿ ಮೋದಿಯನ್ನು ತರಾಟೆಗೆ ತೆಗೆದುಕೊಂಡರು. ಈ ದೃಶ್ಯಾವಳಿಗಳ ಒಂದು ತುಣುಕಿನಲ್ಲಿ, ನೀವು ನನ್ನನ್ನು ದಿಲ್ಲಿಗೆ ಕಳುಹಿಸಿದರೆ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವ ಭರವಸೆಯನ್ನು ಈಡೇರಿಸಲಾಗುವುದು. ಮಾತ್ರವಲ್ಲ ವಿಸ್ತರಿಸಲಾಗುವುದು ಎಂದು ಪ್ರಧಾನಿ ಮೋದಿ ಚುನಾವಣೆಗೂ ಮುನ್ನ ಭಾಷಣವೊಂದರಲ್ಲಿ ಹೇಳುತ್ತಿರುವುದನ್ನು ತೋರಿಸಲಾಗಿದೆ.

ನಂತರ ಆಂಧ್ರದ ಹೊಸ ರಾಜಧಾನಿ ಅಮರಾವತಿಗೆ ಶಂಕುಸ್ಥಾಪನೆ ನೆರವೇರಿಸಿದ ಸಮಯದಲ್ಲಿ, ಮರುಸಂಘಟನಾ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿರುವ ಎಲ್ಲ ಭರವಸೆಗಳನ್ನು ಭಾರತ ಸರಕಾರ ಈಡೇರಿಸಲಿದೆ ಎಂದು ಅಮರಾವತಿಯಲ್ಲಿ ನಿಂತು ನಾನು ಆಂಧ್ರ ಪ್ರದೇಶದ ಜನರಿಗೆ ಭರವಸೆ ನೀಡುತ್ತೇನೆ ಎಂದು ಪ್ರಧಾನಿ ಹೇಳುತ್ತಿರುವುದು ಇನ್ನೊಂದು ದೃಶ್ಯಾವಳಿಯಲ್ಲಿ ದಾಖಲಾಗಿದೆ. ಸದನವನ್ನು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ಮುಂದೂಡುತ್ತಿರುವುದು ಮತ್ತು ಅವಿಶ್ವಾಸ ನಿರ್ಣಯ ಮಂಡನೆಗೆ ಅವಕಾಶ ನೀಡದಿರುವ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ನಡೆಯ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ನಾಯ್ಡು, ನನಗೆ ನ್ಯಾಯ ಬೇಕು. ಅದನ್ನು ನೀಡುವ ಬದಲು ಸರಕಾರ ನಮ್ಮ ವಿರುದ್ಧವೇ ದಾಳಿ ಮಾಡುತ್ತಿದೆ. ಮಸೂದೆಗಳನ್ನು ಹೇಗೆ ಅಂಗೀಕರಿಸಲಾಗಿದೆ. ಎಷ್ಟು ಭರವಸೆಗಳನ್ನು ಈಡೇರಿಸಲಾಗಿದೆ ಮತ್ತು ಎಷ್ಟು ಭರವಸೆಗಳು ಬಾಕಿಯಿವೆ ಎಂಬುದನ್ನು ಸರಕಾರ ಜನರಿಗೆ ತಿಳಿಸಬೇಕು. ಅದಕ್ಕಾಗಿ ಚರ್ಚೆ ನಡೆಯಬೇಕು ಎಂದು ತಿಳಿಸಿದ್ದಾರೆ. ಆಂಧ್ರ ಸರಕಾರವು ಕೇಂದ್ರದ ನಿಧಿಯನ್ನು ಬಳಸಿರುವುದಕ್ಕೆ ಬಳಕೆ ಪ್ರಮಾಣಪತ್ರ ಒಪ್ಪಿಸಿದೆ. ಆದರೆ ನಾವು ಬಳಕೆ ಪ್ರಮಾಣಪತ್ರ ನೀಡಿಲ್ಲ ಎಂದು ಕೇಂದ್ರದ ನಾಯಕರು ಸುಳ್ಳುಸುದ್ದಿ ಹರಡುತ್ತಿದ್ದಾರೆ. ಪ್ರಧಾನಿಯವರಿಗೆ ಈ ಬಗ್ಗೆ ಮಾಹಿತಿಯಿಲ್ಲವೇ? ಪ್ರಧಾನಿ ಮೋದಿಯೇ ನಮ್ಮ ಈ ಪ್ರಶ್ನೆಗೆ ನೇರವಾಗಿ ಉತ್ತರಿಸಬೇಕು ಎಂದು ನಾಯ್ಡು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News