ಬಂಟ್ವಾಳ: ಅಕ್ರಮ ಮರಳು ಅಡ್ಡೆಗೆ ಪೊಲೀಸ್ ದಾಳಿ; ಬೋಟ್ ಸಹಿತ ಮರಳು ವಶ
ಬಂಟ್ವಾಳ, ಮಾ. 28: ಅಕ್ರಮ ಮರಳು ಅಡ್ಡೆಯೊಂದಕ್ಕೆ ಪೊಲೀಸರು ದಾಳಿ ನಡೆಸಿ, ಯಾಂತ್ರೀಕೃತ ಬೋಟ್ ಸಹಿತ ಲಕ್ಷಾಂತರ ರೂ. ಮೌಲ್ಯದ ಮರಳು ವಶಪಡಿಸಿಕೊಂಡ ಘಟನೆ ತಾಲೂಕಿನ ಬಡಗಬೆಳ್ಳೂರು ಸಮೀಪದ ಫಲ್ಗುಣಿ ನದಿ ತಟದಲ್ಲಿ ಬುಧವಾರ ನಡೆದಿದೆ.
ಜಿಲ್ಲಾ ಎಸ್ಪಿ ರವಿಕಾಂತೇ ಗೌಡ ಅವರ ನಿರ್ದೇಶನದಲ್ಲಿ ಖಚಿತ ಮಾಹಿತಿಯ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸರು, ಕಂದಾಯ ಹಾಗೂ ಭೂವಿಜ್ಞಾನಿ ಅಧಿಕಾರಿಗಳು ಈ ದಾಳಿ ನಡೆಸಿದ್ದು, ಒಂದು ನಾಡಬೋಟ್ ಹಾಗೂ ಮರಳು ವಶಪಡಿಸಿಕೊಂಡಿದ್ದಾರೆ. ಮರಳು ಅಡ್ಡೆಯಲ್ಲಿ ತೊಡಗಿದ್ದವರು ದಾಳಿಯ ವೇಳೆ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅದೇ ರೀತಿ ನದಿಯ ಇನ್ನೊಂದು ದಡದ ಮರಳು ಅಡ್ಡೆಗೆ ದಾಳಿ ನಡೆಸಿದ್ದು, ಬೊಟ್‌ಗಳು ಹಾಗೂ ಮರಳು ವಶಕ್ಕೆ ಪಡೆದುಕೊಂಡಿದ್ದು, ಇವುಗಳ ಮೌಲ್ಯ ಸಮಾರು 60 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಪ್ರದೆಶ ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಟ್ಟಿದೆ ಎಂದು ಜಿಲ್ಲಾ ಎಸ್ಪಿ ರವಿಕಾಂತೇ ಗೌಡ ಅವರು ತಿಳಿಸಿದ್ದಾರೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ತರಬೇತಿ ಪಡೆಯುತ್ತಿರುವ ಅಕ್ಷಯ್ ಹಾಕೆ ಅವರು ದಾಳಿಯ ನೇತೃತ್ವವನ್ನು ವಹಿಸಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ಎಸ್ಸೈ ಪ್ರಸನ್ನ ಕುಮಾರ್, ಸಿಬ್ಬಂದಿಗಳಾದ ಪಿಸಿ ಬಸವರಾಜ್, ಎ.ಎಚ್.ಸಿ ಕಿರಣ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.