ಎ. 1ರಂದು ಭೂಮಿಗೆ ಅಪ್ಪಳಿಸಲಿರುವ ಚೀನಾದ ಬಾಹ್ಯಾಕಾಶ ನಿಲ್ದಾಣ?

Update: 2018-03-28 17:00 GMT

ಪ್ಯಾರಿಸ್, ಮಾ. 28: ನಿಯಂತ್ರಣ ಕಳೆದುಕೊಂಡಿರುವ ಚೀನಾದ ಬಾಹ್ಯಾಕಾಶ ನಿಲ್ದಾಣವು ಎಪ್ರಿಲ್ 1 ಅಥವಾ ಅದರ ಸುತ್ತಮುತ್ತ ಭೂಮಿಯತ್ತ ಧಾವಿಸಲಿದೆ ಹಾಗೂ ಈ ಪ್ರಕ್ರಿಯೆಯಲ್ಲಿ ಅದು ಹೋಳಾಗಲಿದೆ ಎಂದು ಐರೋಪ್ಯ ಬಾಹ್ಯಾಕಾಶ ಸಂಸ್ಥೆ ಹೇಳಿದೆ.

‘‘ಸುಮಾರು 7 ಟನ್ ಭಾರದ ಬಾಹ್ಯಾಕಾಶ ನಿಲ್ದಾಣವು ಅತ್ಯಂತ ವೇಗವಾಗಿ ಭೂಮಿಯ ವಾತಾವರಣದಲ್ಲಿ ಧಾವಿಸುವಾಗ ಉಂಟಾಗುವ ಶಾಖದಲ್ಲಿ ಅದರ ಹೆಚ್ಚಿನ ಭಾಗಗಳು ಉರಿದುಹೋಗಲಿವೆ’’ ಎಂದು ಅದು ಹೇಳಿಕೆಯೊಂದರಲ್ಲಿ ತಿಳಿಸಿದೆ.

‘ಟಿಯಾಂಗಾಂಗ್ 1’ (ಸ್ವರ್ಗದ ಅರಮನೆ) ಬಾಹ್ಯಾಕಾಶ ಪ್ರಯೋಗಾಲಯದ ಕೆಲವು ಅವಶೇಷಗಳು ಸಮುದ್ರಕ್ಕೆ ಅಥವಾ ಭೂಮಿಯ ಮೇಲೆ ಎಲ್ಲಾದರೂ ಬೀಳುವ ಸಾಧ್ಯತೆಯಿದೆ. ಆದರೆ, ಮಾನವರಿಗೆ ಹಾನಿಯಾಗುವ ಸಾಧ್ಯತೆ ಅತ್ಯಂತ ಕಡಿಮೆ ಎಂದು ಜರ್ಮನಿಯ ಡರ್ಮ್‌ಸ್ಟಾಟ್‌ನಲ್ಲಿರುವ ಐರೋಪ್ಯ ಬಾಹ್ಯಾಕಾಶ ಸಂಸ್ಥೆಯ ಬಾಹ್ಯಾಕಾಶ ಅವಶೇಷಗಳ ಪರಿಣತ ಸ್ಟಿಜನ್ ಲೆಮನ್ಸ್ ಹೇಳುತ್ತಾರೆ.

 ‘‘60 ವರ್ಷಗಳಿಗೂ ಹೆಚ್ಚಿನ ಬಾಹ್ಯಾಕಾಶ ಯಾನದ ಅವಧಿಯಲ್ಲಿ, ಈವರೆಗೆ ಇಂಥ ಸುಮಾರು 6,000 ನಿಯಂತ್ರಣ ಕಳೆದುಕೊಂಡಿರುವ ಬೃಹತ್ ಬಾಹ್ಯಾಕಾಶ ವಸ್ತುಗಳು ಭೂಮಿಗೆ ಅಪ್ಪಳಿಸಿವೆ. ಅವುಗಳ ಪೈಕಿ ಹೆಚ್ಚಿನವು ಉಪಗ್ರಹಗಳು ಮತ್ತು ರಾಕೆಟ್‌ನ ಮೇಲಿನ ಭಾಗಗಳು’’ ಎಂದು ಅವರು ಎಎಫ್‌ಪಿಗೆ ಹೇಳಿದ್ದಾರೆ.

‘‘ಇಂಥ ಒಂದು ಪ್ರಕರಣದಲ್ಲಿ, ಭೂಮಿಗೆ ಅಪ್ಪಳಿಸುತ್ತಿರುವ ವಸ್ತುವೊಂದ ಪುಡಿಯಾಗಿತ್ತು. ಅದರ ಒಂದು ತುಂಡು ವ್ಯಕ್ತಿಯೊಬ್ಬರಿಗೆ ಬಡಿದಿತ್ತು. ಆದರೆ, ಅದರಿಂದ ಆ ವ್ಯಕ್ತಿಯು ಗಾಯಗೊಂಡಿಲ್ಲ’’ ಎಂದು ಅವರು ಹೇಳಿದ್ದಾರೆ.

ಕಕ್ಷೆಯಲ್ಲಿ ನಿಲುಗಡೆಗೆ ಸಂಬಂಧಿಸಿದ ತಂತ್ರಜ್ಞಾನಗಳ ಪ್ರಾಯೋಗಿಕ ಪರೀಕ್ಷೆಗಳಿಗಾಗಿ ಚೀನಾವು ಈ ಬಾಹ್ಯಾಕಾಶ ನಿಲ್ದಾಣವನ್ನು 2011 ಸೆಪ್ಟಂಬರ್‌ನಲ್ಲಿ ಬಾಹ್ಯಾಕಾಶಕ್ಕೆ ಉಡಾಯಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News