ಯುದ್ಧಪೀಡಿತ ಯಮನ್‌ನಲ್ಲಿ 20 ಲಕ್ಷ ಮಕ್ಕಳು ಶಾಲೆಯಿಂದ ಹೊರಗೆ

Update: 2018-03-28 17:18 GMT

ಸನಾ (ಯಮನ್), ಮಾ. 28: ಯಮನ್‌ನ ನಾಗರಿಕ ಯುದ್ಧದಲ್ಲಿ ಸೌದಿ ಅರೇಬಿಯ ಮತ್ತು ಅದರ ಮಿತ್ರಪಕ್ಷಗಳು 2015ರಲ್ಲಿ ಮಧ್ಯಪ್ರವೇಶ ಮಾಡಿದಂದಿನಿಂದ ಸುಮಾರು 5 ಲಕ್ಷ ಮಕ್ಕಳು ಶಾಲೆಗೆ ಹೋಗುವುದನ್ನು ನಿಲ್ಲಿಸಿದ್ದಾರೆ ಎಂದು ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆ ಯುನಿಸೆಫ್ ಮಂಗಳವಾರ ಹೇಳಿದೆ.

ಇದರೊಂದಿಗೆ ಈ ಯುದ್ಧಪೀಡಿತ ದೇಶದಲ್ಲಿ ಶಿಕ್ಷಣ ವಂಚಿತ ಮಕ್ಕಳ ಸಂಖ್ಯೆ 20 ಲಕ್ಷಕ್ಕೆ ಏರಿದೆ ಹಾಗೂ ಅಪ್ರಾಪ್ತ ವಯಸ್ಕರನ್ನು ಹೋರಾಟದಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ ಎಂದು ಅದು ತಿಳಿಸಿದೆ.

‘‘ಯಮನ್‌ನಲ್ಲಿ ಮಕ್ಕಳ ಒಂದು ಇಡೀ ತಲೆಮಾರು ಅನಿಶ್ಚಿತ ಭವಿಷ್ಯವನ್ನು ಎದುರಿಸುತ್ತಿದೆ. ಯಾಕೆಂದರೆ ಅವರಿಗೆ ಸೀಮಿತ ಶಿಕ್ಷಣ ಸಿಗುತ್ತಿದೆ ಅಥವಾ ಯಾವುದೇ ಶಿಕ್ಷಣ ಸಿಗುತ್ತಿಲ್ಲ’’ ಎಂದು ಯುನಿಸೆಫ್‌ನ ಯಮನ್ ಪ್ರತಿನಿಧಿ ಮೆರಿಟ್‌ಕ್ಸೆಲ್ ರೆಲಾನೊ ಹೇಳಿದ್ದಾರೆ.

‘‘ಮಕ್ಕಳ ಶಾಲಾ ಪ್ರಯಾಣವೂ ಅಪಾಯಕಾರಿಯಾಗಿದೆ. ಯಾಕೆಂದರೆ, ಶಾಲೆಗೆ ಹೋಗುವ ದಾರಿಯಲ್ಲಿ ಅವರು ಸಾಯಬಹುದಾಗಿದೆ’’ ಎಂದು ಅವರು ಹೇಳಿದ್ದಾರೆ.

ಯುದ್ಧದಲ್ಲಿ ಮಕ್ಕಳ ಬಳಕೆ

2015ರ ಬಳಿಕ, ಹಲವಾರು ಸಶಸ್ತ್ರ ಗುಂಪುಗಳು ಕನಿಷ್ಠ 2,419 ಮಕ್ಕಳನ್ನು ಹೋರಾಟಕ್ಕಾಗಿ ನೇಮಿಸಿವೆ ಎಂದು ಯುನಿಸೆಫ್ ತಿಳಿಸಿದೆ.

ಇರಾನ್ ಬೆಂಬಲಿತ ಹೌದಿ ಬಂಡುಕೋರರ ವಿರುದ್ಧ ಸೌದಿ ಅರೇಬಿಯ ನೇತೃತ್ವದ ಮಿತ್ರಕೂಟ 2015ರಲ್ಲಿ ದಾಳಿ ಆರಂಭಿಸಿದ ಬಳಿಕ ಸುಮಾರು 10,000 ಮಂದಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News