ಮ್ಯಾನ್ಮಾರ್‌ನ ನೂತನ ಅಧ್ಯಕ್ಷರಾಗಿ ವಿನ್ ಮಿಂತ್
ನೇಪಿಟಾವ್ (ಮ್ಯಾನ್ಮಾರ್), ಮಾ. 28: ಮ್ಯಾನ್ಮಾರ್ ಸಂಸತ್ತು ಬುಧವಾರ ವಿನ್ ಮಿಂತ್ರನ್ನು ದೇಶದ ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ.
ವಿದೇಶಾಂಗ ಸಚಿವೆ ಹಾಗೂ ಸರಕಾರಿ ಸಲಹೆಗಾರ್ತಿ ಆಂಗ್ ಸಾನ್ ಸೂ ಕಿಯ ನಂಬಿಕಸ್ತರಾಗಿರುವ ಮಿಂತ್ರನ್ನು ಕೆಳ ಸದನವು ಅಧ್ಯಕ್ಷೀಯ ಅಭ್ಯರ್ಥಿಯನ್ನಾಗಿ ಆರಿಸಿತು. ಚುನಾವಣೆಯಲ್ಲಿ ಅವರು 403 ಮತಗಳನ್ನು ಪಡೆದರು.
ಉಪಾಧ್ಯಕ್ಷ ಹಾಗೂ ಸೇನೆಯ ಬೆಂಬಲ ಹೊಂದಿರುವ ಮಿಂತ್ ಸ್ವೇ 211 ಮತಗಳನ್ನು ಪಡೆದರು.
ಈ ಹಿಂದಿನ ಅಧ್ಯಕ್ಷ ಹಟಿನ್ ಕ್ಯಾವ್ ಅನಾರೋಗ್ಯ ಹಿನ್ನೆಲೆಯಲ್ಲಿ ಕಳೆದ ವಾರ ರಾಜೀನಾಮೆ ನೀಡಿದ ಬಳಿಕ ಅಧ್ಯಕ್ಷ ಹುದ್ದೆ ತೆರವಾಗಿತ್ತು.
ಹಟಿನ್ ಕ್ಯಾವ್‌ರಂತೆಯೇ 66 ವರ್ಷದ ವಿನ್ ಮಿಂತ್ ಕೂಡ ದೀರ್ಘಾವಧಿಯ ಸೂ ಕಿ ನಿಷ್ಠರಾಗಿದ್ದಾರೆ ಹಾಗೂ ಆಡಳಿತಾರೂಢ ನ್ಯಾಶನಲ್ ಲೀಗ್ ಫಾರ್ ಡೆಮಾಕ್ರಸಿ ಪಕ್ಷದ ಪ್ರಮುಖ ನಾಯಕರಾಗಿದ್ದಾರೆ.
ಸೂ ಕಿ ಅಧ್ಯಕ್ಷ ಪದವಿಯನ್ನು ಸ್ವೀಕರಿಸಲು ಸಾಧ್ಯವಾಗದಂತೆ ಹಿಂದಿನ ಸೇನಾಡಳಿತವು ಸಂವಿಧಾನ ತಿದ್ದುಪಡಿಯೊಂದನ್ನು ತಂದಿತ್ತು.
ಇದನ್ನು ಸರಿಪಡಿಸುವುದಕ್ಕಾಗಿ, 2016ರಲ್ಲಿ ಹಟಿನ್ ಕ್ಯಾವ್ ಅಧಿಕಾರ ವಹಿಸಿದ ಬಳಿಕ, ಸೂ ಕಿಗಾಗಿಯೇ ಸರಕಾರದ ಸಲಹಾಕಾರ್ತಿ ಹುದ್ದೆಯನ್ನು ಸೃಷ್ಟಿಸಲಾಗಿತ್ತು.
ಅಲ್ಪಸಂಖ್ಯಾತ ರೊಹಿಂಗ್ಯಾ ಮುಸ್ಲಿಮರ ಮೇಲೆ ಮ್ಯಾನ್ಮಾರ್ ಸೇನೆ ನಡೆಸುತ್ತಿರುವ ದಮನ ಕಾರ್ಯಾಚರಣೆ ಹಾಗೂ ಅದರ ಪರಿಣಾಮವಾಗಿ 6 ಲಕ್ಷಕ್ಕೂ ಅಧಿಕ ನಿರಾಶ್ರಿತರು ಮ್ಯಾನ್ಮಾರ್‌ನ ರಖೈನ್ ರಾಜ್ಯದಿಂದ ಬಾಂಗ್ಲಾದೇಶಕ್ಕೆ ಪಲಾಯನಗೈದು ಉಂಟಾಗಿರುವ ಅಂತಾರಾಷ್ಟ್ರೀಯ ಬಿಕ್ಕಟ್ಟಿನ ನಡುವೆಯೇ ಈ ಬೆಳವಣಿಗೆ ನಡೆದಿದೆ.