×
Ad

ಬಂಟ್ವಾಳ: ಕ್ಷುಲ್ಲಕ ವಿಚಾರಕ್ಕೆ ಇಬ್ಬರ ನಡುವೆ ಜಗಳ: ಓರ್ವನ ಹತ್ಯೆ

Update: 2018-03-28 23:43 IST

ಬಂಟ್ವಾಳ, ಮಾ. 28: ಪ್ರೀತಿಸುವ ವಿಚಾರದಲ್ಲಿ ಸ್ನೇಹಿತರಿಬ್ಬರಲ್ಲಿ ನಡೆದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಮಂಗಳೂರಿನ ದಕ್ಷಿಣ ಬಂದರ್‌ನಲ್ಲಿ ಬುಧವಾರ ನಡೆದಿದೆ.

ನರಿಕೊಂಬು ಗ್ರಾಮದ ನಿವಾಸಿ ನಾರಾಯಣ ಎಂಬವರ ಪುತ್ರ ಯತೀಶ್ ತನ್ನ ಸ್ನೇಹಿತನ ಕೈಯಲ್ಲಿ ಹತ್ಯೆಗೆ ಒಳಗಾದ ಯುವಕ ಎಂದು ಗುರುತಿಸಲಾಗಿದೆ. ಆರೋಪಿ ಶಶಿಧರ್‌ನನ್ನು ಬಂಧಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ಘಟನೆಯ ವಿವರ

ಯತೀಶ್ ತನ್ನ ಗೆಳೆಯನಾದ ಶಶಿಧರ ಎಂಬಾತನೊಂದಿಗೆ ಮಾ. 24ರಂದು ಸಂಜೆ 7.30ಕ್ಕೆ ಮನೆಯಿಂದ ಇನ್ನಿಪಡ್ಪುಗೆ ಕಬಡ್ಡಿ ನೋಡಲೆಂದು ಹೋಗಿದ್ದು, ವಾಪಾಸು ಮನೆಗೆ ಬಾರದೇ ನಾಪತ್ತೆಯಾಗಿದ್ದರು. ಈ ಬಗ್ಗೆ ಮಾ. 26ರಂದು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.

ಈ ಸಂಬಂಧ ಮಾ. 27ರಂದು ದಕ್ಷಿಣ ದಕ್ಕೆಯಲ್ಲಿ ಅಪರಿಚಿತ ಮೃತ ದೇಹ ಪತ್ತೆಯಾಗಿದ್ದು, ಮೃತ ದೇಹವನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಇರಿಸಲಾಗಿತ್ತು. ಪೊಲೀಸ್ ವಿಚಾರಣೆ ಬಳಿಕ ಬಂಟ್ವಾಳದಲ್ಲಿ ನಾಪತ್ತೆಯಾದ ಯುವಕನ ಮೃತದೇಹವೆಂದು ತಿಳಿದುಬಂದಿತ್ತು. ಮಾ. 24ರಂದು ಸಂಜೆ 7.30 ತನ್ನ ಮಗನನ್ನು ಶಶಿಧರ ಎಂಬಾತನು ಒತ್ತಾಯ ಪೂರ್ವಕವಾಗಿ ಮನೆಯಿಂದ ಕರೆದುಕೊಂಡು ಹೋಗಿದ್ದಾನೆ. ನಂತರ ಶಶಿಧರ್ ಒಬ್ಬನೇ ತನ್ನ ಮನೆಗೆ ಬಂದಿದ್ದಾನೆ. ಆತನಲ್ಲಿ ತನ್ನ ಮಗನ ಬಗ್ಗೆ ವಿಚಾರಸಿದಾಗ, ನಿಮ್ಮ ಮಗ ಎಲ್ಲಿ ಹೋಗಿದ್ದಾನೆಂದು ತನಗೆ ಗೊತ್ತಿಲ್ಲವೆಂದು ಅಸ್ಪಷ್ಟ ಮಾಹಿತಿ ನೀಡಿದ್ದಾನೆ ಎಂದು ನಾರಾಯಣ ಅವರು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.

ಯತೀಶ್ ಹಾಗೂ ಶಶಿಧರ ಅವರ ನಡುವೆ ಬೆಳ್ತಂಗಡಿಯ ಹುಡುಗಿಯೊಬ್ಬಳನ್ನು ಪ್ರೀತಿಸುವ ವಿಚಾರದಲ್ಲಿ ಆಗಾಗ ಸಣ್ಣ ಪುಟ್ಟ ಜಗಳ ನಡೆದಿದೆ ಎನ್ನಲಾಗಿದೆ. ತನ್ನ ಹುಡುಗಿ ವಿಷಯದಲ್ಲಿ ಯತೀಶ್ ತಲೆಹಾಕಿದ್ದು, ಆತನನ್ನು ಕೊಲೆ ಮಾಡದೇ ಬಿಡುವುದಿಲ್ಲ ಎಂದು ತನ್ನ ಸ್ನೇಹಿತರಲ್ಲಿ ಶಶಿಧರನು ಹೇಳಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಶಶಿಧರ್ ತನ್ನ ಮಗನನ್ನು ನಿನ್ನಿಪಡ್ಪು ಎಂಬಲ್ಲಿಗೆ ಒತ್ತಾಯ ಪೂರ್ವಕವಾಗಿ ಕರೆದುಕೊಂಡು ಹೋಗಿ ನೀರಿಗೆ ದೂಡಿ ಹಾಕಿ ಕೊಲೆ ಮಾಡಿದ್ದಾನೆ ಎಂದು ತಂದೆ ನಾರಾಯಣ ಅವರು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ. 

ಈ ಸಂಬಂಧ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News