‘ಮೊದಲು ಸಂಸದೆ ಶೋಭಾ ಸಾಧನಾ ಪಟ್ಟಿ ಬಿಡುಗಡೆ ಮಾಡಿ’
ಉಡುಪಿ, ಮಾ. 29: ಉಡುಪಿಯ ಶಾಸಕನಾಗಿ, ಕಂದಾಯ ಸಚಿವ ಸಂಸದೀಯ ಕಾರ್ಯದರ್ಶಿಯಾಗಿ ಬಳಿಕ ಜಿಲ್ಲಾ ಉಸ್ತುವಾರಿ ಸಚಿವನಾಗಿ ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ 2026 ಕೋಟಿ ರೂ.ಅನುದಾನವನ್ನು ತಂದು ಸರ್ವತೋಮುಖ ಅಭಿವೃದ್ಧಿ ಪಡಿಸಿದ್ದು, ತನ್ನ ವಿರುದ್ಧ ಆರೋಪ ಪಟ್ಟಿಯನ್ನು ಬಿಡುಗಡೆಗೊಳಿಸುವ ಮುನ್ನ ಉಡುಪಿ ಸಂಸದೆಯಾಗಿರುವ ಶೋಭಾ ಅವರ ಕಳೆದ ನಾಲ್ಕು ವರ್ಷಗಳ ಸಾಧನಾ ಪಟ್ಟಿಯನ್ನು ಬಿಡುಗಡೆಗೊಳಿಸಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಬಿಜೆಪಿಗೆ ಪ್ರತಿ ಸವಾಲು ಹಾಕಿದ್ದಾರೆ.
ಉಡುಪಿಯ ಪ್ರೆಸ್‌ಕ್ಲಬ್‌ನಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ತನ್ನ ವಿರುದ್ಧ ಬಿಡುಗಡೆಗೊಳಿಸಿದ ಆರೋಪ ಪಟ್ಟಿಗೆ ವಿವರವಾದ ಉತ್ತರ ನೀಡಿದ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ರಘುಪತಿ ಭಟ್‌ರಂಥ ಕಳಂಕಿತ, ಇಡೀ ಕರ್ನಾಟದ ಜನತೆ ತಲೆತಗ್ಗಿಸುವಂತೆ ಮಾಡಿದ ವ್ಯಕ್ತಿ, ಭ್ರಷ್ಟಾಚಾರ ರಹಿತವಾಗಿ ಕಳೆದ ಐದು ವರ್ಷಗಳ ಕಾಲ ಉಡುಪಿ ಜನತೆಗೆ ಸೇವೆ ಸಲ್ಲಿಸಿದ ನನ್ನ ಬಗ್ಗೆ ಮಾತನಾಡುವ, ಆರೋಪ ಮಾಡುವ ನೈತಿಕತೆಯನ್ನೇ ಹೊಂದಿಲ್ಲ ಎಂದರು.
ಉಡುಪಿಯಲ್ಲಿ ನಾನು ಮಾಡಿದ ಜನಸೇವೆ ಹಾಗೂ ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ಕಾಗಿಯೇ ‘ಪ್ರಜಾವಾಣಿ’ ಮತ್ತು ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಗಳು ನಡೆಸಿದ ರಾಜ್ಯ ಮಟ್ಟದ ಸಮೀಕ್ಷೆಯಲ್ಲಿ ರಾಜ್ಯದ 224 ಶಾಸಕರಲ್ಲಿ ತನಗೆ ಅಗ್ರಸ್ಥಾನ ದೊರೆತಿದೆ. ಕ್ಷೇತ್ರದ ಜನತೆಯ ಆಶೀರ್ವಾದದಿಂದ ತನಗಿದು ದೊರಕಿದ್ದು, ಹೀಗಾಗಿ ಕಳಂಕಿತ ರಘುಪತಿ ಭಟ್ಟರ ಸರ್ಟಿಫಿಕೇಟ್ ನನಗೆ ಬೇಕಾಗಿಲ್ಲ ಎಂದರು.
2013ರ ವಿಧಾನಸಭಾ ಚುನಾವಣೆಗೆ ಮುನ್ನ ಬಿಡುಗಡೆಗೊಳಿಸಿದ ವಿಷನ್- 2025ರಲ್ಲಿ ನೀಡಿದ ಬಹುತೇಕ ಭರವಸೆಗಳನ್ನು ನಾನು ಈಡೇರಿಸುವ ಪ್ರಯತ್ನ ನಡೆಸಿದ್ದೇನೆ. ನಾನು ಶಾಸಕನಾಗಿ ಇನ್ನೂ ಐದು ವರ್ಷ ಮಾತ್ರ ಪೂರ್ಣಗೊಂಡಿದೆ. ಈಗಲೇ ನನ್ನ ಸಾಧನೆಯ ಬಗ್ಗೆ ಪ್ರಶ್ನೆ ಮಾಡುವ ಬದಲು 2025ರವರೆಗೆ ಅಂದರೆ ಇನ್ನೂ ಏಳು ವರ್ಷ ಕಾಯುವ ತಾಳ್ಮೆಯನ್ನು ತೋರಿಸಲಿ ಎಂದು ವ್ಯಂಗ್ಯವಾಡಿದರು.
ವಿಷನ್-2025ರಲ್ಲಿ ನಾನು ಪ್ರಸ್ತಾಪಿಸಿದ ಮೋನೊರೈಲು ಹಾಗೂ ಗ್ಯಾಸ್ ಪೈಪ್‌ಲೈನ್‌ಗಳಿಗೆ ಕೇಂದ್ರ ಸರಕಾರದ ಸಹಕಾರ, ಅನುದಾನ ಸಿಗಬೇಕಿದೆ. ಆದರೆ ಈಗಿರುವ ಎನ್‌ಡಿಎ ಸರಕಾರದಿಂದ ಯಾವುದೇ ಅನುದಾನ ಬಂದಿಲ್ಲ. ಬರುವ ಆಶಾವಾದವೂ ನನಗಿಲ್ಲ. ಸಂಸದೆ ಶೋಭಾ ಕರಂದ್ಲಾಜೆ ಅವರ ಸಹಕಾರ ಪಡೆಯಲು ನಾನು ಸಂಪೂರ್ಣ ವಿಫಲನಾಗಿದ್ದೇನೆ. ಈ ವಿಷಯದಲ್ಲಿ ನನ್ನನ್ನು ಪ್ರಶ್ನಿಸುವ ಮುನ್ನ ಸಂಸದೆಯೊಂದಿಗೆ ಚರ್ಚಿಸಲಿ ಎಂದು ಖಾರವಾಗಿ ನುಡಿದರು.
2013ರಲ್ಲಿ ನಾನು ಚುನಾವಣೆಗೆ ಸ್ಪರ್ಧಿಸಿದಾಗ ಕೇಂದ್ರದಲ್ಲಿ ಯುಪಿಸಿ ಸರಕಾರವಿತ್ತು. ನಮ್ಮ ನಾಯಕ ಆಸ್ಕರ್ ಫೆರ್ನಾಂಡೀಸ್ ಹಾಗೂ ಆಗಿನ ಸಂಸದ ಜಯಪ್ರಕಾಶ್ ಹೆಗ್ಡೆ ಅವರ ನೆರವಿನ ಮೂಲಕ ಕೇಂದ್ರದಿಂದ ಬೇಕಾದ ಸಹಾಯ ಪಡೆಯುವ ವಿಶ್ವಾಸವಿತ್ತು. ಚುನಾವಣೆಯಲ್ಲಿ ಯುಪಿಎ ಸೋಲುವುದೆಂದು ನಾನು ಕನಸು ಮನಸ್ಸಿನಲ್ಲೂ ಎಣಿಸಿರಲಿಲ್ಲ. ಈಗಿನ ಎನ್‌ಡಿಎ ಸರಕಾರ ನಮ್ಮ ಯಾವುದೇ ಬೇಡಿಕೆಗಳಿಗೂ ಸ್ಪಂಧಿಸುತ್ತಿಲ್ಲ ಎಂದರು.
ಉಡುಪಿ ಜಿಲ್ಲಾ ಆಸ್ಪತ್ರೆ: ನಾನು ಶಾಸಕನಾಗುವಾಗ ಸಚಿವರಾಗಿದ್ದ ಆಸ್ಕರ್ ಫೆರ್ನಾಂಡೀಸ್ ಸಹಕಾರದಿಂದ ಕೇಂದ್ರದ ನೆರವು ಪಡೆದು 500 ಕೋಟಿ ರೂ. ವೆಚ್ಚದಲ್ಲಿ ಸರಕಾರಿ ಆಸ್ಪತ್ರೆ ನಿರ್ಮಿಸುವ ಪ್ರಸ್ತಾಪ ಇಟ್ಟಿದ್ದೆ. ಆದರೆ ಈಗಿನ ಬಿಜೆಪಿ ಸರಕಾರ ಯಾವುದೇ ಅನುದಾನ ನೀಡದ ಕಾರಣ ಅದು ಸಾಧ್ಯವಾಗಲಿಲ್ಲ ಎಂದರು. ಹೀಗಾಗಿ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರ ಸಹಕಾರದೊಂದಿಗೆ ಖಾಸಗಿಯವರ ಸಹಭಾಗಿತ್ವದೊಂದಿಗೆ 200 ಹಾಸಿಗೆಗಳ ಅತ್ಯಾಧುನಿಕ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ಸಾಹೇಬರ ಹೆಸರಿನಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಿಸಿದ್ದು, ಅಲ್ಲಿ ಬಡವರಿಗೆ ಸಂಪೂರ್ಣ ಉಚಿತ ವೈದ್ಯಕೀಯ ಸೇವೆ ಸಿಗಲಿದೆ. ಈಗಾಗಲೇ ಹೊರರೋಗಿ ವಿಭಾಗ ಪ್ರಾರಂಭಗೊಂಡಿದ್ದು, ಮುಂದಿನ ತಿಂಗಳಿನಿಂದ ಒಳರೋಗಿ ವಿಭಾಗವೂ ಪ್ರಾರಂಭಗೊಳ್ಳಲಿದೆ. ಆರು ಮಹಡಿಗಳ ಸಂಪೂರ್ಣ ಹವಾನಿಯಂತ್ರಿತ ಆಸ್ಪತ್ರೆಯಲ್ಲಿ ಆರು ಶಸ್ತ್ರಚಿಕಿತ್ಸಾ ಕೊಠಡಿಗಳಿವೆ ಎಂದರು.
ತಾನು ಸಚಿವನಾದ ಬಳಿಕ 2016ರಲ್ಲಿ ಉಡುಪಿಯ ತಾಲೂಕು ಆಸ್ಪತ್ರೆಯನ್ನು ಅಧಿಕೃತವಾಗಿ ಜಿಲ್ಲಾಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಿದ್ದೇನೆ. 13.5 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆಗೆ ಕಟ್ಟಡ ಹಾಗೂ ಇತರ ಮೂಲಭೂತ ಸೌಲಭ್ಯ ಒದಗಿಸಲಾಗಿದೆ. ಸಿಬ್ಬಂದಿಗಳ ನೇಮಕ, ಅವರಿಗೂ ವಸತಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಪ್ರಮೋದ್ ತಿಳಿಸಿದರು.
1.32 ಕೋಟಿ ರೂ.ವೆಚ್ಚದಲ್ಲಿ ಜಿಲ್ಲಾ ಆಯುಷ್ ಆಸ್ಪತ್ರೆ, ಕ್ಯಾಂಟೀನ್ ಸೌಲಭ್ಯ, ಕೆಎಂಎಫ್ ನಂದಿನಿ ಹಾಲು ಕೇಂದ್ರ ಹಾಗೂ ಹಾಪ್ಕಾಮ್ಸ್ ಮಾರಾಟ ಮಳಿಗೆಗಳ ನಿರ್ಮಾಣ, ಟಿಬಿ ವಾರ್ಡ್ ನವೀಕರಣ, ಶವಾಗಾರ ನಿರ್ಮಾಣ ಕಾಮಗಾರಿ, ನೀರು ಸರಬರಾಜು ಮತ್ತು ನೈರ್ಮಲ್ಯ ವ್ಯವಸ್ಥೆ ಹಾಗೂ ಕಟ್ಟಡದ ದುರಸ್ತಿ ಕಾಮಗಾರಿ, ವೈದ್ಯಾಧಿಕಾರಿಗಳ ವಸತಿಗೃಹ, ಶುಶ್ರೂಶಕಿ(ನರ್ಸ್) ಹಾಗೂ ಡಿ ಗ್ರೂಪ್ ನೌಕರರ ವಸತಿಗೃಹ ನಿರ್ಮಾಣ ಹಂತದಲ್ಲಿವೆ ಎಂದರು.
ಚತುಷ್ಪಥ ಕಾಮಗಾರಿ: ರಸ್ತೆ ಅಭಿವೃದ್ಧಿ ಮಾಡಲು ಭೂಸ್ವಾಧೀನ ಕಾನೂನು ಕಠಿಣವಾಗಿರುವುದರಿಂದ ಪರಿಹಾರ ನಾಲ್ಕು ಪಟ್ಟು ಹೆಚ್ಚು ಕೊಡಬೇಕಾಗಿದೆ. ಆದರೂ ಉಡುಪಿ-ಅಂಬಾಗಿಲು-ಮಣಿಪಾಲ ರಸ್ತೆ ಚತುಷ್ಪಥ ಕಾಮಗಾರಿ ಲೋಕೋಪಯೋಗಿ ಇಲಾಖೆಯ ಮೂಲಕ ಭರದಿಂದ ನಡೆಯುತ್ತಿದೆ. ಆದರೆ ನಾಲ್ಕು ವರ್ಷಗಳಾದರೂ ಮಲ್ಪೆ-ಮಣಿಪಾಲ-ತೀರ್ಥಹಳ್ಳಿ ರಾ.ಹೆದ್ದಾರಿ169ಎ ಕಾಮಗಾರಿ ಇನ್ನೂ ಪ್ರಾರಂಭಗೊಂಡಿಲ್ಲ. ಇನ್ನೂ ಅದು ಸಹಾ ಡಿಪಿಆರ್ ಹಂತ ದಲ್ಲಿದೆ. ಅದರ ಹೊಂಡ ಮುಚ್ಚಲು ಜಿಲ್ಲಾಧಿಕಾರಿಗಳು ರಾಜ್ಯದ ಅನುದಾನ ಬಳಸಿಕೊಂಡಿದ್ದರು. ಇದು ಶೋಭಾ ಕರಂದ್ಲಾಜೆಯವರ ವೈಫಲ್ಯವಲ್ಲವೇ ಎಂದು ಪ್ರಮೋದ್ ಪ್ರಶ್ನಿಸಿದರು.
ಉಪ್ಪೂರಲ್ಲಿ ಜಿಟಿಟಿಸಿ ಕೇಂದ್ರ: ಉಪ್ಪೂರಿನಲ್ಲಿ ಸ್ನಾತಕೋತ್ತರ ಕೇಂದ್ರಕ್ಕೆ ಮೀಸಲಿರಿಸಿದ ಜಾಗವನ್ನು ಪರಿಶೀಲಿಸಿದ ಮಂಗಳೂರು ವಿವಿ ತಜ್ಞರ ಸಮಿತಿ ಈ ಜಾಗ ಸಮತಟ್ಟು ಅಲ್ಲದ ಉಬ್ಬು ತಗ್ಗುಗಳ ಪ್ರದೇಶವಾದುದರಿಂದ ಸ್ನಾತಕೋತ್ತರ ಕೇಂದ್ರಕ್ಕೆ ಕಾಪು ಕ್ಷೇತ್ರದ ಬೆಳಪುವನ್ನು ಆಯ್ಕೆ ಮಾಡಿತ್ತು ಎಂದ ಪ್ರಮೋದ್, ಹೀಗಾಗಿ ಉಪ್ಪೂರಿನಲ್ಲಿ 44 ಕೋಟಿ ರೂ. ವೆಚ್ಚದಲ್ಲಿ ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದ (ಜಿಟಿಟಿಸಿ) ಕಾಮಗಾರಿ ಪ್ರಗತಿಯಲ್ಲಿದೆ. ನಿರುದ್ಯೋಗಿಗಳಿಗೆ ಕೌಶಲ್ಯವನ್ನು ಹೆಚ್ಚಿಸಲು ನಾಲ್ಕು ವರ್ಷಗಳ ಡಿಪ್ಲೋಮಾ ಕೋರ್ಸ್ ಕೇಂದ್ರ ಇದಾಗಿದೆ ಎಂದರು.
ರಾಜ್ಯದಲ್ಲಿ ಸಚಿವರಾಗಿದ್ದ ವಿನಯಕುಮಾರ್ ಸೊರಕೆ ಅವರ ವಿಶೇಷ ಮುತುವರ್ಜಿಯಿಂದ ಕಾಪು ಪುರಸಭೆಯಾದದ್ದು ಬಿಟ್ಟರೆ ಬೇರೆಲ್ಲೂ ಪುರಸಭೆ ರಚನೆಯಾಗಿಲ್ಲ. ಬ್ರಹ್ಮಾವರ ಆದ್ಯತೆಯಲ್ಲಿ ಮುಂದೆ ಪುರಸಭೆಯಾಗಲಿದೆ. ಬ್ರಹ್ಮಾವರ ತಾಲೂಕು ರಚನೆ ಕಾರ್ಯ ಪ್ರಗತಿಯಲ್ಲಿದ್ದು, ಗ್ರಾಮಗಳ ಗುರುತಿಸುವಿಕೆ, ಆರ್ಥಿಕ ಸಂಪನ್ಮೂಲ ಕ್ರೋಡೀಕರಣ ನಡೆದಿದ್ದು, ತಾಲೂಕು ಘೋಷಣೆ ನಂತರದ ಪ್ರಕ್ರಿಯೆಗಳು ಅನುಷ್ಠಾನಗೊಳ್ಳುತ್ತಿವೆ ಎಂದರು.
ಉಡುಪಿ ಕ್ಷೇತ್ರಕ್ಕೆ 72 ಕೋಟಿ ರೂ. ವೆಚ್ಚದ ಚಾಂತಾರು ಮತ್ತು ತೆಂಕನಿಡಿಯೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಟೆಂಡರ್ ಹಂತದಲ್ಲಿದ್ದು, ಕೆಲವೇ ದಿನಗಳಲ್ಲಿ ಕಾಮಗಾರಿಗಳು ಪ್ರಾರಂಭ ವಾಗಲಿವೆ. ಹಸಿರು ನ್ಯಾಯಪೀಠದ ಆದೇಶದ ಹಾಗೂ ಮಾರ್ಗಸೂಚಿಯಂತೆ ಜಿಲ್ಲೆಯಲ್ಲಿ ಮರಳುಗಾರಿಕೆಗೆ ಅವಕಾಶ ಮಾಡಿ ಕೊಡಲಾಗಿದೆ. ಜಿಲ್ಲೆಯ ಮರಳು ಹೊರ ಜಿಲ್ಲೆಗೆ ಹೋಗದಂತೆ ನಿರ್ಬಂಧಿಸಲಾಗಿದೆ. ನಾನ್ ಸಿಆರ್‌ಝಡ್ ಪ್ರದೇಶದ ಮರಳುಗಾರಿಕೆಗೆ ಕೇಂದ್ರದ ಪರಿಸರ ಇಲಾಖೆ ಕಾನೂನು ಅಡ್ಡಿಯಾಗಿದ್ದು, ಬಿಜೆಪಿ ನಾಯಕರು ಈ ಬಗ್ಗೆ ಪ್ರಯತ್ನಿಸಲಿ ಎಂದು ಸವಾಲು ಹಾಕಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ, ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಕಾಂಗ್ರೆಸ್ ನಾಯಕರಾದ ನರಸಿಂಹ ಮೂರ್ತಿ, ಜನಾರ್ದನ ಭಂಡಾರ್ಕರ್, ಸತೀಶ್ ಅಮೀನ್ ಪಡುಕೆರೆ ಉಪಸ್ಥಿತರಿದ್ದರು.