×
Ad

ಮೂಡುಬಿದಿರೆಯಲ್ಲಿ ಶಿಕಾರಿಗೆ ಬಲಿಯಾದ ಪ್ರಕರಣ: ಓರ್ವ ಸೆರೆ, ಮತ್ತೊಬ್ಬನಿಗಾಗಿ ಶೋಧ

Update: 2018-03-29 22:37 IST

ಮೂಡುಬಿದಿರೆ, ಮಾ. 29: ವಾರದ ಹಿಂದೆ ಶಿಕಾರಿಗೆಂದು ಹೋದ ಸ್ನೇಹಿತರಿಬ್ಬರು ಕರಿಂಜೆಯ ಅರಂತ ಬಾಕ್ಯಾರು ಗದ್ದೆಯ ಬದಿಯಲ್ಲಿ ಶವವಾಗಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ಇಬ್ಬರು ಆರೋಪಿಗಳ ಪೈಕಿ ಓರ್ವನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಸ್ಥಳೀಯ ಅರಂತ ಬಾಕ್ಯಾರು ನಿವಾಸಿ ಶೇಖರ್ (23) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.

ಪ್ರಾಂತ್ಯ ಗ್ರಾಮದ ಪೇಪರ್‌ಮಿಲ್ ನಿವಾಸಿ ಗ್ರೇಶನ್ ರೊಡ್ರಿಗಸ್ ಹಾಗೂ ಕೃಷಿಕ ಕರಿಂಜೆ ಕಕ್ಕೆಬೆಟ್ಟು ನಿವಾಸಿ ಪ್ರವೀಣ್ ತೌರೋ ಕಳೆದ ಮಾ. 20ರಂದು ರಾತ್ರಿ ಕರಿಂಜೆಗುತ್ತು ಶಾಲೆಯ ಬಳಿಯಿಂದ ಮಾರಿಂಜ ಅರಣ್ಯ ಪ್ರದೇಶಕ್ಕೆ ಶಿಕಾರಿಗೆ ಹೊರಟವರು ನಾಪತ್ತೆಯಾಗಿದ್ದರು.

ಮಾ. 22 ರಂದು ಅರಂತ ಬಾಕ್ಯಾರು ಗದ್ದೆಯ ಬದಿಯಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದ್ದವು. ಮೇಲ್ನೋಟಕ್ಕೆ ಇದು ಕಾಡು ಪ್ರಾಣಿಗಳ ಬೇಟೆಗೆ ಸ್ಥಳೀಯರು ವಿದ್ಯುತ್ ತಂತಿಗಳನ್ನು ಅಳವಡಿಸಿದ್ದು, ವಿದ್ಯುತ್ ಸ್ಪರ್ಶವಾಗಿ ಸಾವನ್ನಪ್ಪಿರಬಹುದೆಂಬ ಸಂಶಯ ಹುಟ್ಟುಹಾಕಿತ್ತು. ಅದಾಗಲೇ ಸ್ಥಳೀಯರಿಬ್ಬರು ನಾಪತ್ತೆಯಾದ ವಿಷಯದ ಬೆನ್ನಟ್ಟಿದ ಪೋಲೀಸರಿಗೆ ಓರ್ವ ಆರೋಪಿ ಸೆರೆ ಸಿಕ್ಕಿದ್ದು, ಕಾಡು ಪ್ರಾಣಿಗಳ ಬೇಟೆಗೆ ವಿದ್ಯುತ್ ತಂತಿ ಅಳವಡಿಸಿರುವ ಬಗ್ಗೆ ಒಪ್ಪಿಕೊಂಡಿರುವುದಾಗಿ ತಿಳಿದು ಬಂದಿದೆ.

ಪ್ರಕರಣದಲ್ಲಿ ನಾಪತ್ತೆಯಾಗಿರುವ ಇನ್ನೋರ್ವ ಆರೋಪಿಗಾಗಿ ತೀವ್ರ ಶೋಧ ನಡೆಯುತ್ತಿದೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News