ಉಡುಪಿ: ಅನಗತ್ಯ ಕಿರುಕುಳ ನೀಡದಂತೆ ಜಿಲ್ಲಾಧಿಕಾರಿಗೆ ಕೋಟ ಆಗ್ರಹ
ಉಡುಪಿ, ಮಾ.29: ಚುನಾವಣಾ ನೀತಿಸಂಹಿತೆ ಹೆಸರಿನಲ್ಲಿ ರಾಜಕೀಯ ಪಕ್ಷಗಳು ಮತ್ತು ಸರಕಾರ ಸಾರ್ವಜನಿಕ ಸ್ಥಳದಲ್ಲಿ ಅಳವಡಿಸಿದ ಬ್ಯಾನರ್, ಬಂಟಿಂಗ್ಸ್, ಜಾಹಿರಾತುಗಳನ್ನು ತೆರವು ಮಾಡುವುದರೊಂದಿಗೆ ಪೂರ್ವ ನಿರ್ಧರಿತ ನಾಗಮಂಡಲವೂ ಸೇರಿದಂತೆ ವಿವಿಧ ಧಾರ್ಮಿಕ ಪ್ರಕ್ರಿಯೆಗಳನ್ನು ತಡೆಯುವ, ವಿನಾಃ ಕಾರಣ ಅಧಿಕಾರಿಗಳ ಮೂಲಕ ಕಿರುಕುಳ ನೀಡುವ ಪ್ರಕ್ರಿಯೆ ಅನೇಕ ಕಡೆಗಳಲ್ಲಿ ನಡೆಯುತ್ತಿದ್ದು, ಇಂಥ ಗೊಂದಲ ಸೃಷ್ಟಿಸುವ ಕಾರ್ಯಕ್ಕೆ ಮುಂದಾಗಬಾರದು ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಉಡುಪಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಸಾಸ್ತಾನದಲ್ಲಿ ಪೂರ್ವ ನಿರ್ಧರಿತವಾದ ನಾಗಮಂಡಲ ಕಾರ್ಯಕ್ರಮ ಹಾಗೂ ಚೇಂಪಿ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ನಡೆಯುವ ವಸಂತಮಾಸ ಕಾರ್ಯಕ್ರಮವೂ ರಾಜಕೀಯ ರಹಿತವಾಗಿದ್ದು, ಅಗತ್ಯವೆನಿಸಿದರೆ ಅಧಿಕಾರಿಗಳ ಮೂಲಕ ನೀತಿ ಸಂಹಿತೆ ಉಲ್ಲಂಘನೆಯ ಕುರಿತು ಪರಿಶೀಲಿಸುವ ಇಲ್ಲವೇ ಸೂಕ್ತ ಪ್ರಾಧಿಕಾರದ ಅನುಮತಿ ಪಡೆಯಿರೆಂದು ನಿರ್ಬಂಧಿಸಬಹುದೇ ಹೊರತು, ನಡುರಾತ್ರಿ ಅಧಿಕಾರಿಗಳ ಮೂಲಕ ಒತ್ತಡ ಹೇರಿ ಕಿರುಕುಳ ನೀಡುವುದು ಜಿಲ್ಲಾಡಳಿತಕ್ಕೆ ಶೆಭೆತರದು ಎಂದವರು ತಿಳಿಸಿದ್ದಾರೆ.
ಸಾಸ್ತಾನದ ನಾಗಮಂಡಲ, ಚೇಂಪಿ ಲಕ್ಷ್ಮಿವೆಂಕಟರಮಣ ದೇವಸ್ಥಾನದ ವಸಂತಮಾಸ ಕಾರ್ಯಕ್ರಮದಲ್ಲಿ ಅಧಿಕಾರಿಗಳು ನೀಡಿದ ಕಿರುಕುಳವನ್ನು ಮುಂದಿನ ಒಂದೂವರೆ ತಿಂಗಳ ಚುನಾವಣಾ ಸಮಯದಲ್ಲಿ ಮುಂದುವರಿ ಸಬಾರದು. ಜಿಲ್ಲೆಯ ಜನ ಕಾನೂನಿಗೆ ಗೌರವ ನೀಡುತ್ತಾರೆ. ಧಾರ್ಮಿಕ ಸಮಾರಂಭಗಳಲ್ಲಿ ಹಠಾತ್ ಗೊಂದಲ ನಿರ್ಮಿಸುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಕೋಟ ಶ್ರೀನಿವಾಸ ಪೂಜಾರಿ ಜಿಲ್ಲಾಧಿಕಾರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದು, ಜಿಲ್ಲಾಡಳಿತ ಸ್ವೇಚ್ಚಾಚಾರದಿಂದ ವರ್ತಿಸಿದರೆ, ರಾಜ್ಯ ಮತ್ತು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಲಾಗುವುದು ಎಂದು ಎಚ್ಚರಿಸಿದ್ದಾರೆ.