ಒಪ್ಪಂದ ಉಲ್ಲಂಘನೆ: ಅಸಾಂಜ್‌ರ ಹೊರ ಸಂಪರ್ಕ ಕಡಿದ ಇಕ್ವೆಡಾರ್

Update: 2018-03-29 17:56 GMT
ಜೂಲಿಯನ್ ಅಸಾಂಜ್

 ಕ್ವಿಟೊ (ಇಕ್ವೆಡಾರ್), ಮಾ. 29: ತನ್ನ ಲಂಡನ್ ರಾಯಭಾರ ಕಚೇರಿಯಲ್ಲಿರುವ ವಿಕಿಲೀಕ್ಸ್ ಸ್ಥಾಪಕ ಜೂಲಿಯನ್ ಅಸಾಂಜ್ ಹೊರಜಗತ್ತಿನೊಂದಿಗೆ ಸಂಪರ್ಕಿಸುವುದನ್ನು ತಡೆಹಿಡಿಯಲಾಗಿದೆ ಎಂದು ಇಕ್ವೆಡಾರ್ ಬುಧವಾರ ಹೇಳಿದೆ.

ಇಕ್ವೆಡಾರ್‌ನ ಲಂಡನ್ ರಾಯಭಾರ ಕಚೇರಿಯಲ್ಲಿ ಅಸಾಂಜ್ 2012ರಿಂದಲೂ ಅಡಗಿಕೊಂಡಿದ್ದಾರೆ.

ರಾಯಭಾರ ಕಚೇರಿಯಲ್ಲಿರುವಾಗ ಇತರ ದೇಶಗಳ ವ್ಯವಹಾರಗಳಲ್ಲಿ ಹಸ್ತಕ್ಷೇಪ ನಡೆಸಬಾರದು ಎಂಬ 2017ರ ಒಪ್ಪಂದವನ್ನು ಆಸ್ಟ್ರೇಲಿಯ ಪ್ರಜೆ ಅಸಾಂಜ್ ಉಲ್ಲಂಘಿಸಿದ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಇಕ್ವೆಡಾರ್ ಸರಕಾರದ ಹೇಳಿಕೆಯೊಂದು ತಿಳಿಸಿದೆ. ಆದರೆ, ಅದು ಹೆಚ್ಚಿನ ವಿವರಗಳನ್ನು ನೀಡಿಲ್ಲ.

ಈ ಒಪ್ಪಂದದ ಅನುಸಾರ, ‘‘ಇತರ ದೇಶಗಳೊಂದಿಗಿನ ಸಂಬಂಧಗಳಲ್ಲಿ ಹಸ್ತಕ್ಷೇಪ ಎಂಬುದಾಗಿ ಭಾವಿಸಬಹುದಾದ ಸಂದೇಶಗಳನ್ನು ಕಳುಹಿಸುವುದಿಲ್ಲ’’ ಎಂಬುದಾಗಿ ಅಸಾಂಜ್ ಪ್ರಮಾಣ ಮಾಡಿದ್ದರು ಎಂದು ಹೇಳಿಕೆ ತಿಳಿಸಿದೆ.

ಒಪ್ಪಂದ ಉಲ್ಲಂಘನೆಯನ್ನು ಅವರು ಮುಂದುವರಿಸಿದರೆ ಇಕ್ವೆಡಾರ್ ಇತರ ಕ್ರಮಗಳನ್ನು ತೆಗೆದುಕೊಳ್ಳಬಹುದಾಗಿದೆ ಎಂದು ಹೇಳಿಕೆ ತಿಳಿಸಿದೆ.

ಲೈಂಗಿಕ ಅಪರಾಧದ ತೂಗುಗತ್ತಿ

ಸ್ವೀಡನ್‌ನಲ್ಲಿ ನಡೆಸಿದರೆನ್ನಲಾದ ಲೈಂಗಿಕ ಅಪರಾಧಕ್ಕೆ ಸಂಬಂಧಿಸಿ ವಿಚಾರಣೆ ಎದುರಿಸಲು ಅಸಾಂಜ್‌ರನ್ನು ಆ ದೇಶಕ್ಕೆ ಗಡಿಪಾರು ಮಾಡಬೇಕು ಎಂಬುದಾಗಿ ಬ್ರಿಟಿಶ್ ನ್ಯಾಯಾಲಯವೊಂದು 2012ರಲ್ಲಿ ತೀರ್ಪು ನೀಡಿದ ಬಳಿಕ ಅವರು ಲಂಡನ್‌ನಲ್ಲಿರುವ ಇಕ್ವೆಡಾರ್ ರಾಯಭಾರ ಕಚೇರಿಯಲ್ಲಿ ಆಶ್ರಯ ಪಡೆದಿದ್ದಾರೆ.

ತನ್ನ ವಿರುದ್ಧದ ಆರೋಪಗಳು ರಾಜಕೀಯ ಪ್ರೇರಿತ ಎಂಬುದಾಗಿ ಅಸಾಂಜ್ ಹೇಳುತ್ತಾರೆ. ಒಂದು ವೇಳೆ ತಾನು ಸ್ವೀಡನ್‌ಗೆ ಹೋದರೆ ಅಲ್ಲಿಂದ ತನ್ನನ್ನು ಅಮೆರಿಕಕ್ಕೆ ಗಡಿಪಾರು ಮಾಡುವ ಸಾಧ್ಯತೆಯಿದೆ ಎಂಬ ಭೀತಿಯನ್ನು ಅವರು ವ್ಯಕ್ತಪಡಿಸುತ್ತಾರೆ.

2010ರಲ್ಲಿ ಅಮೆರಿಕದ ರಹಸ್ಯ ಸೇನಾ ದಾಖಲೆಗಳು ಮತ್ತು ರಾಜತಾಂತ್ರಿಕ ಕೇಬಲ್‌ಗಳನ್ನು ‘ವಿಕಿಲೀಕ್ಸ್’ನಲ್ಲಿ ಪ್ರಕಟಿಸಿರುವುದಕ್ಕಾಗಿ ಅವರು ಅಮೆರಿಕದಲ್ಲಿ ಜೈಲು ಶಿಕ್ಷೆಯನ್ನು ಎದುರಿಸುತ್ತಿದ್ದಾರೆ.

ಅಸಾಂಜ್ ಉಲ್ಲಂಘನೆಯೇನು?

ಬ್ರಿಟನ್‌ನ ಸ್ಯಾಲಿಸ್‌ಬರಿ ನಗರದಲ್ಲಿ ಮಾರ್ಚ್ 4ರಂದು ರಶ್ಯದ ಮಾಜಿ ಡಬಲ್ ಏಜಂಟ್ ಮೇಲೆ ನಡೆದ ವಿಷ ಪ್ರಾಶನದ ಹಿಂದೆ ರಶ್ಯವಿದೆ ಎಂಬ ಬ್ರಿಟನ್‌ನ ಆರೋಪವನ್ನು ಅಸಾಂಜ್ ಸೋಮವಾರ ಟ್ವಿಟರ್ ಮೂಲಕ ಪ್ರಶ್ನಿಸಿದ್ದರು.

ಇಕ್ವೆಡಾರ್‌ನ ಕ್ರಮಕ್ಕೆ ಇದೇ ಕಾರಣವಾಗಿದೆ.

ವಿಷಪ್ರಾಶನಕ್ಕೆ ಪ್ರತೀಕಾರವಾಗಿ ಬ್ರಿಟನ್ ಮತ್ತು 20ಕ್ಕೂ ಅಧಿಕ ಇತರ ದೇಶಗಳು ರಶ್ಯದ ರಾಜತಾಂತ್ರಿಕರನ್ನು ಉಚ್ಚಾಟಿಸಲು ತೆಗೆದುಕೊಂಡಿರುವ ನಿರ್ಧಾರವನ್ನೂ ಅಸಾಂಜ್ ಪ್ರಶ್ನಿಸಿದ್ದಾರೆ.

‘‘ಅಸಾಂಜ್‌ರ ವರ್ತನೆಯು ಬ್ರಿಟನ್ ಮತ್ತು ಐರೋಪ್ಯ ಒಕ್ಕೂಟದೊಂದಿಗಿನ ನಮ್ಮ ಉತ್ತಮ ಸಂಬಂಧಗಳನ್ನು ಅಪಾಯಕ್ಕೆ ಒಡ್ಡುತ್ತದೆ’’ ಎಂದು ಇಕ್ವೆಡಾರ್ ಸರಕಾರದ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News