ರೈಲ್ವೆ ಉದ್ಯೋಗಕ್ಕಾಗಿ ಅರ್ಜಿ ಹಾಕಿದವರ ಸಂಖ್ಯೆ ಈ ದೇಶದ ಜನರಿಗಿಂತಲೂ ಅಧಿಕ!
ಹೊಸದಿಲ್ಲಿ, ಮಾ.30: ಸುಮಾರು 90 ಸಾವಿರ ಹುದ್ದೆಗಳಿಗೆ ಸಂಬಂಧಿಸಿ ರೈಲ್ವೆ 2 ಕೋಟಿ 50 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. 1.3 ಲಕ್ಷ ನೌಕರರನ್ನು ಹೊಂದಿರುವ ರೈಲ್ವೆ ಭಾರತದಲ್ಲಿ ಅತೀ ಹೆಚ್ಚು ನೌಕರರಿರುವ ಸಂಸ್ಥೆಯಾಗಿದೆ. ಆದರೆ ಈ ಬಾರಿ ರೈಲ್ವೆ ಉದ್ಯೋಗಕ್ಕಾಗಿ 2.5 ಕೋಟಿ ಮಂದಿ ಅರ್ಜಿ ಸಲ್ಲಿಸಿದ್ದು, ಇದು ಆಸ್ಟ್ರೇಲಿಯಾದ ಜನಸಂಖ್ಯೆಗಿಂತ ಹೆಚ್ಚಾಗಿದೆ.
ಇಂಜಿನ್ ಚಾಲಕರು, ತಂತ್ರಜ್ಞರು, ಬಡಗಿಗಳು, ಹಳಿ ತಪಾಸಣೆಗಾರರು ಹಾಗು ಇತರ ಸ್ಥಾನಗಳಿಗೆ ರೈಲ್ವೆಯು ಅಭ್ಯರ್ಥಿಗಳನ್ನು ಆಹ್ವಾನಿಸಿತ್ತು. “ಕಳೆದ ಕೆಲ ವರ್ಷಗಳಿಂದ ನಾವು ಹುದ್ದೆಗಳಿಗೆ ನೇಮಕಾತಿ ಮಾಡಿರಲಿಲ್ಲ” ಎಂದು ರೈಲ್ವೆ ಬೋರ್ಡ್ ಚೇರ್ ಮೆನ್ ಅಶ್ವನಿ ಲೊಹಾನಿ ಹೇಳಿದ್ದಾರೆ.
ಕಳೆದ ತಿಂಗಳು ವಿವಿಧ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸಲು ರೈಲ್ವೆ ನೇಮಕಾತಿ ಮಂಡಳಿ ಜಾಹೀರಾತುಗಳನ್ನು ಪ್ರಕಟಿಸಿತ್ತು. ಈವರೆಗೆ 2.5 ಕೋಟಿ ಜನರು ಅರ್ಜಿ ಸಲ್ಲಿಸಿದ್ದಾರೆ. ಶನಿವಾರ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ ಎಂದವರು ಹೇಳಿದ್ದಾರೆ.