ಸಜೀಪ ಮುನ್ನೂರು ಅಕ್ರಮ ಮರಳುಗಾರಿಕೆ: ಅಧಿಕಾರಿಗಳಿಂದ ದಾಳಿ
Update: 2018-03-30 18:13 IST
ಬಂಟ್ವಾಳ, ಮಾ. 30: ಅಕ್ರಮ ಮರಳುಗಾರಿಕೆ ಅಡ್ಡೆವೊಂದಕ್ಕೆ ದಾಳಿ ನಡೆಸಿದ ಪೊಲೀಸರು ಯಾಂತ್ರೀಕೃತ ದೋಣಿ ಸಹಿತ ಲಕ್ಷಾಂತರ ರೂ. ಮೌಲ್ಯದ ಮರಳನ್ನು ವಶಪಡಿಸಿಕೊಂಡ ಘಟನೆ ಸಜೀಪ ಮುನ್ನೂರು ಗ್ರಾಮದ ಕೊಪ್ಪಳ ಎಂಬಲ್ಲಿ ಶುಕ್ರವಾರ ನಡೆದಿದೆ.
ಬಂಟ್ವಾಳ ಪ್ರೊಬೇಷನರಿ ಎಸ್ಪಿ ಅಕ್ಷಯ್ ಹಾಗೂ ತಹಶೀಲ್ದಾರ್ ಜೀನ್ ಮೇರಿ ತೌರೋ ನೇತೃತ್ವದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.
ಸಜೀಪ ಮುನ್ನೂರು ಗ್ರಾಮದ ಕೊಪ್ಪಳ ಎಂಬಲ್ಲಿ ಅಕ್ರಮ ಮರಳುಗಾರಿಕೆಯ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು, ನದಿ ತೀರದಲ್ಲಿ ದಾಸ್ತಾನು ಇರಿಸಲಾದ ಮರಳು, ಯಾಂತ್ರೀಕೃತ ದೋಣಿ, ಲಾರಿ ಮತ್ತಿತರ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದು, ಇವುಗಳ ಒಟ್ಟು ಮೌಲ್ಯ 10 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಬಂಟ್ವಾಳ ಉಪತಹಶೀಲ್ದಾರ್ ರಾಜೇಶ್ ನಾಯ್ಕಾ, ಆಡಳಿತ ಶಾಖೆಯ ಸೀತಾರಾಮ ಕಮ್ಮಾಜೆ, ಗ್ರಾಮ ಲೆಕ್ಕಾಧಿಕಾರಿಗಳಾದ ಯೋಗಾನಂದ, ವಿಜೇತ, ಗ್ರಾಮ ಸಹಾಯಕರಾದ ನವೀನ್, ಶಿವಪ್ರಸಾದ್ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.