ಉಡುಪಿ: ಕ್ರೈಸ್ತರಿಂದ ಧ್ಯಾನ, ಉಪವಾಸದಿಂದ ಗುಡ್‌ಫ್ರೈಡೆ ಆಚರಣೆ
ಉಡುಪಿ, ಮಾ.30: ಕ್ರೈಸ್ತ ಸಮುದಾಯದ ಪವಿತ್ರ ದಿನವಾದ ಶುಭ ಶುಕ್ರವಾರವನ್ನು (ಗುಡ್‌ಫ್ರೈಡೆ) ಇಂದು ಉಡುಪಿ ಜಿಲ್ಲೆಯಾದ್ಯಂತ ಉಪವಾಸ, ಧ್ಯಾನ ಹಾಗೂ ಪ್ರಾರ್ಥನೆಯೊಂದಿಗೆ ಆಚರಿಸಲಾಯಿತು. ಜಿಲ್ಲೆಯ ಎಲ್ಲಾ ಚರ್ಚುಗಳಲ್ಲೂ ಬೆಳಗ್ಗಿನಿಂದ ಪ್ರಾರ್ಥನೆ, ಧ್ಯಾನ, ಯೇಸುವಿನ ಶಿಲುಬೆಯ ಹಾದಿಯ ವಾಚನ ಜರಗಿತು.
ಧರ್ಮಪ್ರಾಂತದ ಪ್ರಧಾನ ದೇವಾಲಯವಾದ ಮಿಲಾಗ್ರಿಸ್ ಕ್ಯಾಥೆಡ್ರಲ್‌ನಲ್ಲಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತಿ ವಂ. ಜೆರಾಲ್ಢ್ ಐಸಾಕ್ ಲೋಬೊ ಪ್ರಾರ್ಥನಾ ವಿಧಿಯನ್ನು ನೆರವೇರಿಸಿ, ಶಿಲುಬೆಯನ್ನು ಅನಾವರಣಗೊಳಿಸುವ ಮೂಲಕ ಗೌರವ ಸೂಚಿಸಿದರು.
ಈ ವೇಳೆ ಸಂದೇಶ ನೀಡಿದ ಅವರು, ಯೇಸುವಿನ ದೀನತೆ, ಮುಗ್ದತೆ, ದುರ್ಬಲತೆಯಾಗಿರಲಿಲ್ಲ. ಅವರು ನಮ್ಮೆಲ್ಲರ ಪಾಪಗಳಿಗೆ ಮುಕ್ತಿ ನೀಡುವು ದಕ್ಕಾಗಿ ಶಿಲುಬೆಗೇರಿದರು. ಇದರೊಂದಿಗೆ ಮನುಕುಲದ ಉದ್ದಾರಕ್ಕೆ ಕಾರಣಿಭೂತರಾದರು. ದೇವರು ಈ ಲೋಕವನ್ನು ಎಷ್ಟಾಗಿ ಪ್ರೀತಿಸಿದರೆಂದರೆ ತಮ್ಮ ಏಕೈಕ ಪುತ್ರನನ್ನೆ ಈ ಲೋಕಕ್ಕೆ ಧಾರೆಯೆರೆದರು. ಆತನ ಮೇಲೆ ವಿಶ್ವಾಸವಿಟ್ಟ ಯಾರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂಬುದೇ ದೇವರ ಉದ್ದೇಶವಾಗಿತ್ತು. ಈ ಕಾರಣ ಯೇಸು ಸ್ವಾಮಿ ಶಿಲುಬೆಯ ಮರಣವನ್ನು ಆಲಂಗಿಸಿದರು ಹಾಗೂ ಶಿಲುಬೆ ಮೇಲಿಂದ ಕ್ಷಮಾದಾನದ ಶುಭ ಸಂದೇಶವನ್ನು ಸಾರಿದರು ಎಂದರು.
ಈ ವೇಳೆ ಮಿಲಾಗ್ರಿಸ್ ಕ್ಯಾಥೆಡ್ರಲ್‌ನ ರೆಕ್ಟರ್ ವಂ. ಸ್ಟಾನಿ ಬಿ ಲೋಬೊ, ಸಹಾಯಕ ಧರ್ಮಗುರು ವಂ.ರೊಲ್ವಿನ್ ಆರಾನ್ಹಾ, ಪಿಲಾರ್ ಸಂಸ್ಥೆಯ ವಂ. ಹೆರಾಲ್ಡ್ ಮತ್ತು ವಂ.ನೆಲ್ಸನ್, ಧರ್ಮಪ್ರಾಂತದ ಎಸ್ಟೇಟ್ ಮ್ಯಾನೇಜರ್ ವಂ. ಹೆನ್ರಿ ಮಸ್ಕರೇನ್ಹಸ್ ಉಪಸ್ಥಿತರಿದ್ದರು. ಕೆಥೆಡ್ರಲ್ ಮತ್ತು ಚರ್ಚ್‌ನಲ್ಲಿ ಸಾಂಕೇತಿಕವಾಗಿ ಏಸು ಕ್ರಿಸ್ತರ ಶರೀರವನ್ನು ಶಿಲುಬೆಯಿಂದ ಕೆಳಗಿಳಿಸಿ ಅದನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುವ ಪ್ರಕ್ರಿಯೆ ನಡೆಯಿತು.
ಉಡುಪಿ ಶೋಕಮಾತಾ ಇಗರ್ಜಿಯಲ್ಲಿ ನಡೆದ ಶುಭ ಶುಕ್ರವಾರದ ಧಾರ್ಮಿಕ ವಿಧಿಯ ನೇತೃತ್ವವನ್ನು ಚರ್ಚಿನ ಪ್ರಧಾನ ಧರ್ಮಗುರುಗಳಾದ ವಂ.ವಲೇರಿಯನ್ ಮೆಂಡೊನ್ಸಾ ವಹಿಸಿದ್ದರು. ಮೂಡುಬೆಳ್ಳೆ ಸಮೀಪದ ಕುಂತಳನಗರ ಸಂತ ಅಂತೋನಿ ಚರ್ಚಿನಲ್ಲಿ ನಡೆದ ಶುಭ ಶುಕ್ರವಾರದ ಧಾರ್ಮಿಕ ವಿಧಿವಿಧಾನಗಳ ನೇತೃತ್ವನ್ನು ಚರ್ಚಿನ ಧರ್ಮಗುರು ವಂ. ಡೆನಿಸ್ ಡೆಸಾ ವಹಿಸಿದ್ದರು.
ಜಿಲ್ಲೆಯ ಕೆಲವೊಂದು ಚರ್ಚುಗಳಲ್ಲಿ ಯೇಸುಕ್ರಿಸ್ತರು ಮರಣದಂಡನೆಗೆ ಗುರಿಯಾಗುವಲ್ಲಿಂದ ಆರಂಭಿಸಿ ಶಿಲುಬೆ ಹೊತ್ತು ಕಲ್ವಾರಿ ಬೆಟ್ಟಕ್ಕೆ ಸಾಗಿ ಶಿಲುಬೆಗೆ ಏರಿ ಮರಣವನ್ನುಪ್ಪುವ ಘಟನೆಗಳನ್ನು ಸ್ಮರಿಸುವ ಶಿಲುಬೆಯ ಹಾದಿಯನ್ನು ನಟನೆಯ ಮೂಲಕ ಆಯಾ ಚರ್ಚುಗಳ ವಠಾರದಲ್ಲಿ ನಡೆಸಲಾಯಿತು. ಈ ಮೂಲಕ ಭಕ್ತರಿಗೆ ಯೇಸು ಕ್ರಿಸ್ತರು ಶಿಲುಬೆಯ ಹಾದಿಯಲ್ಲಿ ಅನುಭವಿಸಿದ ಕಷ್ಟ ನೋವು ಯಾತನೆ, ಮರಣವನ್ನು ತೋರಿಸಿಕೊಡುವ ವಿಶಿಷ್ಟ ಪ್ರಯತ್ನ ಮಾಡಲಾಯಿತು.
ಯೇಸುವಿನ ಮರಣದಿಂದಾಗಿ ಶೋಕದಿಂದ ಇರುವ ಕ್ರೈಸ್ತ ಧರ್ಮ ಸಭೆ ಶುಕ್ರವಾರದಂದು ಚರ್ಚುಗಳಲ್ಲಿ ಬಲಿಪೂಜೆಯನ್ನು ಅರ್ಪಿಸದೆ ಅದರ ಬದಲು ಯೇಸುವಿನ ಶಿಲುಬೆಯ ಹಾದಿಯನ್ನು ಪರಿಚಯಿಸುವ ಹೊಸ ಒಡಂಬಡಿಕೆಯ ಪವಿತ್ರ ಬೈಬಲಿನ ಪಠಣಗಳು ಎಲ್ಲಾ ಚರ್ಚುಗಳಲ್ಲಿ ನಡೆಸಲಾಯಿತು.