ಅಮಾಯಕರಿಗೆ ಪರಿಹಾರ ಕಲ್ಪಿಸಿ: ತನಿಖಾಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಿ; ಮುನೀರ್ ಕಾಟಿಪಳ್ಳ

Update: 2018-03-30 15:29 GMT

ಮಂಗಳೂರು, ಮಾ. 30: 2014 ಮಾ. 21ರಂದು ಬೆಂಜನಪದವಿನಲ್ಲಿ ನಡೆದ ಬಜರಂಗದಳದ ಕಾರ್ಯಕರ್ತ ರಾಜೇಶ್ ಪೂಜಾರಿ ಕೊಲೆ ಪ್ರಕರಣವನ್ನು ಮರು ತನಿಖೆಗೆಗೊಳಪಡಿಸಬೇಕು. ಅಲ್ಲದೆ, ಕಳಪೆ ತನಿಖೆಯಿಂದ ಇಡೀ ಕೊಲೆ ಪ್ರಕರಣವನ್ನು ದಿಕ್ಕು ತಪ್ಪಿಸಿದ ಅಂದಿನ ತನಿಖಾಧಿಕಾರಿಗಳಾದ ಇನ್ಸ್‌ಪೆಕ್ಟರ್ ಲಿಂಗಪ್ಪ, ರಾಜಶೇಖರ ಮಿಸ್ತ್ರಿ ಸಹಿತ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಒತ್ತಾಯಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಲೆ ಆರೋಪ ಹೊತ್ತು, ಪ್ರಕರಣದಲ್ಲಿ ಫಿಕ್ಸ್ ಆಗಿ ಹಲವು ವಿಧದ ಹಿಂಸೆಗೆ ಗುರಿಯಾದ ಮಲ್ಲೂರಿನ ಅಮಾಯಕರಾದ ಹುಸೈನ್, ಇಮ್ರಾನ್, ಇರ್ಷಾದ್ ಎಂಬ ಯುವಕರನ್ನು ರಾಜೇಶ್ ಪೂಜಾರಿ ಕೊಲೆಯ ಆರೋಪದಿಂದ ನ್ಯಾಯಾಲಯವು ದೋಷಮುಕ್ತಗೊಳಿಸಿದ್ದು, ಇವರಿಗೆ ಸರಕಾರ ಪರಿಹಾರ ಕಲ್ಪಿಸಬೇಕೆಂದೂ ಒತ್ತಾಯಿಸಿದರು.

ರಾಜೇಶ್ ಪೂಜಾರಿ ಕೊಲೆ ಪ್ರಕರಣದಲ್ಲಿ ಅಮಾಯಕರ ಬಂಧನ ನಡೆದಿರುವುದಾಗಿ ಮಲ್ಲೂರು ಗ್ರಾಮಸ್ಥರು ಡಿವೈಎಫ್‌ಐ ನೇತೃತ್ವದಲ್ಲಿ 2014ರಲ್ಲೇ ತೀವ್ರ ಪ್ರತಿಭಟನೆ ನಡೆದಿತ್ತು. ಪ್ರಕರಣವನ್ನು ಉನ್ನತಮಟ್ಟದ ತನಿಖಾ ತಂಡದಿಂದ ಮರು ತನಿಖೆ ಮಾಡುವಂತೆ ಒತ್ತಾಯಿಸಲಾಗಿತ್ತು. ಹೋರಾಟಕ್ಕೆ ಮಣಿದ ರಾಜ್ಯ ಸರಕಾರ ಕೊಲೆ ಪ್ರಕರಣವನ್ನು ಸಿಐಡಿಗೆ ತನಿಖೆಯ ಹೊಣೆ ವಹಿಸಿತ್ತು. ಸಿಐಡಿಯ ಹೊಣೆಗೇಡಿತನ, ರಾಜಕೀಯ ಇಚ್ಚಾಶಕ್ತಿಯ ಕೊರತೆಯಿಂದ ಎರಡು ವರ್ಷಗಳ ನಂತರ ಸಿಐಡಿಯು ಪೊಲೀಸರ ತನಿಖೆಯನ್ನು ಸಮರ್ಥಿಸಿ ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸಿತ್ತು. ಈ ಎಲ್ಲಾ ತನಿಖಾ ನಾಟಕಗಳ ಹೊರತಾಗಿಯೂ ನ್ಯಾಯಾಲಯ ಇದೀಗ ತೀರ್ಪು ನೀಡಿದ್ದು, ಆರೋಪಿಗಳನ್ನು ಕೊಲೆ ಆರೋಪದಿಂದ ದೋಷಮುಕ್ತಗೊಳಿಸಿದೆ. ಈ ಹಿನ್ನೆಲೆಯಲ್ಲಿ ಪೊಲೀಸರ, ಸಿಐಡಿಯ ಕಳಪೆ ತನಿಖಾ ವಿಧಾನ, ಜನಪ್ರತಿನಿಧಿಗಳ, ಸರಕಾರದ ಹೊಣೆಗೇಡಿತನದಿಂದ ಏಳು ತಿಂಗಳ ಜೈಲುವಾಸ, ಪೊಲೀಸ್ ಹಿಂಸೆ, ಸಾಮಾಜಿಕ ಅವಮಾನದಿಂದ ನಲುಗಿರುವ ಮಲ್ಲೂರಿನ ಅಮಾಯಕ ಯುವಕರಿಗೆ ರಾಜ್ಯ ಸರಕಾರ ಪರಿಹಾರ ನೀಡಬೇಕು. ರಾಜೇಶ್ ಪೂಜಾರಿ ಕೊಲೆಗೈದ ನೈಜ ಕೊಲೆಗಾರರನ್ನು ಬಂಧಿಸಲು, ಕೊಲೆ ಪ್ರಕರಣವನ್ನು ಪತ್ತೆ ಹಚ್ಚಲು ವಿಶೇಷ ತನಿಖಾ ತಂಡವನ್ನು ರಚಿಸಬೇಕು ಎಂದು ಮುನೀರ್ ರಾಜ್ಯ ಸರಕಾರವನ್ನು ಒತ್ತಾಯಿಸಿದರು.

ರಾಜೇಶ್ ಪೂಜಾರಿ ಕೊಲೆಯ ಸಂದರ್ಭ ಲೋಕಸಭಾ ಚುನಾವಣೆಯ ಪ್ರಕ್ರಿಯೆಗಳು ಆರಂಭವಾಗಿದ್ದವು. ವಿಎಚ್‌ಪಿ, ಬಜರಂಗದಳ ಕೊಲೆ ಆರೋಪಿಗಳ ಬಂಧನಕ್ಕೆ ಸಮಯದ ಗಡವು ನಿಗದಿಪಡಿಸಿ, ಬಂದ್ ಬೆದರಿಕೆ ಒಡ್ಡಿದ್ದವು. ಆ ಸಂದರ್ಭ ಮಲ್ಲೂರಿನ ತೀರಾ ಬಡತನದ ಅಮಾಯಕ ಹುಡುಗರಾದ ಮನೆ ಮನೆ ತಿರುಗಿ ಕತ್ತರಿ ಸಾಣೆ ಹಾಕುವ, ಫಿನಾಯಿಲ್ ಮಾರುವ ಹುಸೈನ್, ಕೂಲಿ ಕೆಲಸ ಮಾಡುತ್ತಿದ್ದ ಇರ್ಷಾದ್, ಇಮ್ರಾನ್ ರನ್ನು ಬಂಧಿಸಿ, ಪೊಲೀಸರು ತೀರಾ ಕೆಳದರ್ಜೆಯ ಹಿಂಸೆ ನೀಡಿ ಕೊಲೆಯ ಆರೋಪ ಹೊರಿಸಿದ್ದರು. ಈ ಕೊಲೆಗೆ ಮನೆ ಮನೆಗೆ ತಿರುಗಿ ತೆಂಗಿನ ಮರದಿಂದ ಕಾಯಿ ಕೀಳುವ ಇಸಾಕ್, ಟೆಂಪೊ ಕ್ಲೀನರ್ ಅಲ್ತಾಫ್, ಮನ್ಸೂರ್ ಫರಂಗಿ ಪೇಟೆ ಎಂಬವರು ಸುಪಾರಿ ನೀಡಿದ್ದರು ಎಂದು ಪೊಲೀಸರು ಆರೋಪಪಟ್ಟಿಯಲ್ಲಿ ಕಥೆ ಹೆಣೆದಿದ್ದರು. ಅಮಾಯಕರ ಬಂಧನದ ನಂತರ ಬಜರಂಗದಳ, ಎಚ್‌ಪಿ ಪ್ರಕರಣದ ಕುರಿತು ಮೌನ ತಾಳಿದವು. ಬಂಧನಕ್ಕೊಳಗಾದ ಅಮಾಯಕರ ಕುಟುಂಬಸ್ಥರು ಈ ಕುರಿತು ಸ್ಥಳೀಯ ಶಾಸಕ ಮೊಯ್ದಿನ್ ಬಾವ, ಉಸ್ತುವಾರಿ ಸಚಿವ ರಮಾನಾಥ ರೈಗಳಿಗೆ ವಿಷಯವನ್ನು ಮನದಟ್ಟು ಮಾಡಿ, ನ್ಯಾಯಕ್ಕಾಗಿ ಆಗ್ರಹಿಸಿದರೂ ಪ್ರಯೋಜನ ಆಗಿರಲಿಲ್ಲ. ನಂತರ ಡಿವೈಎಫ್‌ಐ ಪ್ರಕರಣವನ್ನು ಕೈಗೆತ್ತಿಕೊಂಡಿತು. ಅಮಾಯಕರ ಬಂಧನದ ಏಳು ತಿಂಗಳ ಬಳಿಕ ರಾಜ್ಯ ಸರಕಾರ ಪ್ರಕರಣವನ್ನು ಸಿಐಡಿಗೆ ಆದೇಶ ನೀಡಿತ್ತು. ಈ ಆದೇಶದದಿಂದ ಏಳು ತಿಂಗಳಿನಿಂದ ಜೈಲಿನಲ್ಲಿದ್ದ ಮಲ್ಲೂರಿನ ಯುವಕರು ಜಾಮೀನು ದೊರಕಿ ಹೊರಬಂದಿದ್ದರು. ಆದರೆ ಸಿಐಡಿಯು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಈ ಕುರಿತು ಸ್ಥಳೀಯ ಶಾಸಕ ಮೊಯ್ದಿನ್ ಬಾವ ಅವರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದೆವು. ಮುಖ್ಯಮಂತ್ರಿಗಳು ಮಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭ ಖುದ್ದು ಭೇಟಿಯಾಗಿ ಶಾಸಕರ ಉಪಸ್ಥಿತಿಯಲ್ಲಿ ಸಮಗ್ರ ತನಿಖೆ ಹಾಗೂ ನ್ಯಾಯಕ್ಕಾಗಿ ಒತ್ತಾಯಿಸಿದ್ದೆವು. ಆದರೆ ರಾಜಕೀಯ ಇಚ್ಚಾಶಕ್ತಿಯ ಕೊರತೆಯಿಂದ ಗಂಭೀರ ತನಿಖೆ ನಡೆಯಲಿಲ್ಲ. ರಾಜೇಶ್ ಪೂಜಾರಿ ಕೊಲೆಯ ಕಾರಣ ಮತ್ತು ಕೊಲೆಯ ಹಿಂದಿರುವ ಶಕ್ತಿಗಳ ಪತ್ತೆ ಸಾಧ್ಯವಾಗಲಿಲ್ಲ ಎಂದು ಮುನೀರ್ ವಿವರಿಸಿದರು.

ಈಗ ನ್ಯಾಯಾಲಯವು ಆರೋಪಪಟ್ಟಿಯ ದೌರ್ಬಲ್ಯ, ಆರೋಪದಲ್ಲಿ ಹೊಂದಾಣಿಕೆ ಇಲ್ಲದಿರುವುದು, ರಾಜೇಶ್ ಪೂಜಾರಿಯ ಪತ್ನಿ ಸಹಿತ ಪ್ರಧಾನ ಸಾಕ್ಷಿಗಳ ಹೇಳಿಕೆಯ ಆಧಾರದಲ್ಲಿ ಪ್ರಕರಣದಿಂದ ಯುವಕರನ್ನು ದೋಷಮುಕ್ತಗೊಳಿಸಿದೆ. ಈ ತೀರ್ಪಿನಿಂದ ರಾಜೇಶ್ ಪೂಜಾರಿ ಕೊಲೆಗೈದ ಆರೋಪಿಗಳು ಯಾರು? ಎಂಬ ಪ್ರಶ್ನೆ ಎದ್ದಿದೆ. ಮತೀಯ ದ್ವೇಷದಿಂದ ನಡೆದ ಕೊಲೆ ಎಂದು ಪೊಲೀಸರು ಮತ್ತು ರಾಜಕೀಯ ಪಕ್ಷಗಳು ಆರೋಪಿಸಿದ ಇಂತಹ ಪ್ರಕರಣಗಳಲ್ಲಿ ಒತ್ತಡದಿಂದ ಪಾರಾಗಲು ಅಮಾಯಕರನ್ನು ಫಿಕ್ಸ್ ಮಾಡಿ ಬೀಸುವ ದೊಣ್ಣೆಯಿಂದ ಪಾರಾಗುವ ಪೊಲೀಸರ ಕಾನೂನು ಬಾಹಿರ ಕ್ರಮಗಳು ಹಾಗೂ ಇವುಗಳನ್ನು ಕಣ್ಣುಮುಚ್ವಿ ಒಪ್ಪಿಕೊಳ್ಳುವ ರಾಜಕೀಯ ವ್ಯವಸ್ಥೆಯಿಂದಾಗಿ ಮತೀಯ ದ್ವೇಷದ ಕೊಲೆಗಳ ಸರಣಿ ಎಗ್ಗಿಲ್ಲದೆ ಮುಂದುವರಿದು ಸಾಮಾಜಿಕವಾಗಿ ಗಂಭೀರ ಸ್ಥಿತಿಗೆ ಕಾರಣವಾಗುತ್ತಿದೆ ಎಂದವರು ಹೇಳಿದರು.

ರಾಜೇಶ್ ಪೂಜಾರಿ ಪ್ರಕರಣದಲ್ಲಿ ನ್ಯಾಯಾಲಯದ ತೀರ್ಪನ್ನು ಗಂಭೀರವಾಗಿ ಪರಿಗಣಿಸಬೇಕು. ಪೊಲೀಸ್ ದೌರ್ಜನ್ಯದಿಂದ ಈಗಲೂ ದೈಹಿಕ ನೋವನ್ನನುಭಸುತ್ತಿರುವ, ದೋಷಮುಕ್ತಗೊಂಡ ಯುವಕರಿಗೆ ಪರಿಹಾರ ಒದಗಿಸಬೇಕು, ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಬೇಕು, ರಾಜೇಶ್ ಪೂಜಾರಿ ಕೊಲೆಯ ಹಿಂದಿನ ಕಾರಣವನ್ನು ಪತ್ತೆ ಹಚ್ಚಿ ಕೊಲೆಗಡುಕರ ಬಂಧನಕ್ಕೆ ದಕ್ಷ ಅಧಿಕಾರಿಗಳ ನೇತೃತ್ವದ ತಂಡ ರಚಿಸಬೇಕು ಎಂದು ಅವರು ಸರಕಾರವನ್ನು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಝ್, ಬಾವಾ ಪದರಂಗಿ, ಸಂತೋಷ್ ಬಜಾಲ್, ಶರೀಫ್ ಮಲ್ಲೂರು, ಜಬ್ಬಾರ್ ಮಲ್ಲೂರು, ಪ್ರಕರಣದಿಂದ ಖುಲಾಸೆಗೊಂಡ ಹುಸೈನ್ ಮಲ್ಲೂರು, ಮಹಮ್ಮದ್ ಇರ್ಷಾದ್, ಇಮ್ರಾನ್, ಶಾಹಿದಾ (ಇಮ್ರಾನ್‌ನ ತಾಯಿ), ನಬಿಸಾ (ಇರ್ಷಾದ್‌ನ ತಾಯಿ), ಜಾಫರ್ (ಹುಸೈನ್‌ರ ತಂದೆ) ಮೊದಲಾದವರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News