ದತ್ತಾಂಶ ಸೋರಿಕೆ : ಫೇಸ್‌ಬುಕ್ ಗೆ ನೋಟಿಸ್ ಜಾರಿ ಮಾಡಿದ ಸರಕಾರ

Update: 2018-03-30 16:40 GMT

ಹೊಸದಿಲ್ಲಿ, ಮಾ. 30: ಭಾರತೀಯ ಮತದಾರರ ಹಾಗೂ ಫೇಸ್‌ಬುಕ್ ಬಳಕೆದಾರರ ಮಾಹಿತಿಯನ್ನು ಇಂಗ್ಲೆಂಡ್ ಮೂಲದ ಕೇಂಬ್ರಿಜ್ ಅನಾಲಿಟಿಕಾ ಅಥವಾ ಅದರ ಅಂಗಸಂಸ್ಥೆ ಇತರ ಸಂಸ್ಥೆಗಳೊಂದಿಗೆ ಹಂಚಿಕೊಂಡಿದೆಯೇ ಎಂದು ಭಾರತ ಸರಕಾರ ಫೇಸ್‌ಬುಕ್ ಅನ್ನು ಪ್ರಶ್ನಿಸಿ ನೋಟಿಸ್ ರವಾನಿಸಿದೆ. ಭಾರತೀಯರ ಮಾಹಿತಿ ದುರ್ಬಳಕೆ ಮಾಡಲಾಗಿದೆ ಹಾಗೂ ಚುನಾವಣೆ ಮೇಲೆ ಪ್ರಭಾವ ಬೀರಲಾಗಿದೆ ಎಂದು ಮಾದ್ಯಮಗಳಲ್ಲಿ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಕಳೆದ ವಾರ ಇದೇ ರೀತಿಯ ನೋಟಿಸ್ ಅನ್ನು ಭಾರತ ಸರಕಾರ ಕೇಂಬ್ರಿಜ್ ಅನಾಲಿಟಿಕಾಕ್ಕೆ ರವಾನಿಸಿತ್ತು.

ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ಭಾರತ ಸರಕಾರ ಕೇಂಬ್ರಿಜ್ ಅನಾಲಿಟಿಕಾಕ್ಕೆ ಶನಿವಾರ ಹಾಗೂ ಫೇಸ್‌ಬುಕ್‌ಗೆ ಎಪ್ರಿಲ್ 7 ಅಂತಿಮ ದಿನಾಂಕ ನಿಗದಿಗೊಳಿಸಿದೆ. ಚುನಾವಣೆ ಮೇಲೆ ಪ್ರಭಾವ ಬೀರಲು ಫೇಸ್‌ಬುಕ್‌ನ ಅಸಂಖ್ಯಾತ ಬಳಕೆದಾರರ ಮಾಹಿತಿಯನ್ನು ಕದ್ದಿರುವುದು ವರದಿಯಾದ ಹಿನ್ನೆಲೆಯಲ್ಲಿ ಫೇಸ್‌ಬುಕ್ ಎಲ್ಲೆಡೆಯಿಂದ ಟೀಕೆಗಳನ್ನು ಎದುರಿಸುತ್ತಿದೆ. ಬಳಕೆದಾರರ ವಿಷಯದಲ್ಲಿ ಫೇಸ್‌ಬುಕ್ ಭಾರತದಲ್ಲಿ ಹೆಜ್ಜೆ ಗುರುತು ಮೂಡಿಸಿದೆ. ಇಷ್ಟು ದೊಡ್ಡ ಸಂಖ್ಯೆಯ ಬಳಕೆದಾರರ ಮಾಹಿತಿಯ ಸುರಕ್ಷೆಗೆ ಹಾಗೂ ಮೂರನೇ ವ್ಯಕ್ತಿ ದುರ್ಬಳಕೆ ಮಾಡಿಕೊಳ್ಳದಿರಲು ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸುವಂತೆ ಭಾರತದ ಇಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ ಫೇಸ್‌ಬುಕ್‌ಗೆ ಕಳುಹಿಸಿದ ನೋಟಿಸಿನಲ್ಲಿ ಆಗ್ರಹಿಸಿದೆ.

 ಫೇಸ್‌ಬುಕ್ ದತ್ತಾಂಶ ಬಳಕೆ ಮಾಡುತ್ತಿರುವ ಫೇಸ್‌ಬುಕ್ ಅಥವಾ ಅದಕ್ಕೆ ಸಂಬಂಧಿತ ಸಂಸ್ಥೆ ಅಥವಾ ಅಂಗಸಂಸ್ಥೆಗಳು ಭಾರತೀಯ ಚುನಾವಣಾ ಪ್ರಕ್ರಿಯೆ ಮೇಲೆ ಪ್ರಭಾವ ಬೀರಲು ಯಾವುದೇ ಸಂಸ್ಥೆಗಳೊಂದಿಗೆ ಜೊತೆಗೂಡಿದೆಯೇ ಎಂಬ ಬಗ್ಗೆ ಕೂಡ ಮಾಹಿತಿ ನೀಡುವಂತೆ ಫೇಸ್‌ಬುಕ್‌ಗೆ ರವಾನಿಸಿದ ನೋಟಿಸಿನಲ್ಲಿ ಭಾರತ ಸರಕಾರ ಕೋರಿದೆ. ಒಂದು ವೇಳೆ ಅಂತಹ ಯಾವುದೇ ಸಂಸ್ಥೆ ಫೇಸ್‌ಬುಕ್‌ನಿಂದ ದತ್ತಾಂಶ ದುರ್ಬಳಕೆ ಮಾಡಿದ್ದರೆ, ದತ್ತಾಂಶದ ರಕ್ಷಣೆಗೆ ಒದಗಿಸಲಾದ ರಕ್ಷಣೆ ಏನು ಎಂದು ಭಾರತ ಸರಕಾರ ನೋಟಿಸಿನಲ್ಲಿ ಪಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News