ಭಟ್ಕಳ: ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಸಭೆ
ಭಟ್ಕಳ, ಮಾ. 30: ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನವಿಕಾಸ ಕೇಂದ್ರ ಮಾವಿನಕುರ್ವೆಯಲ್ಲಿನ ತ್ರೈಮಾಸಿಕ ಸಭೆಯಲ್ಲಿ ಕಾನೂನು ಮಾಹಿತಿ ಕಾರ್ಯಕ್ರಮ ನಡೆಸಲಾಯಿತು.
ಕಾನೂನು ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಅವರು ಶ್ರೀ ಕ್ಷೇತ್ರದ ಕಾರ್ಯಕ್ರಮಗಳಿಂದ ಇಂದು ಪ್ರತಿಯೊಂದು ಮಹಿಳೆಯರೂ ಕೂಡಾ ಸಾಮಾಜಿಕ ಜಾಗೃತಿಯೊಂದಿಗೆ ಆರ್ಥಿಕ ಜಾಗೃತಿಯನ್ನು ಕೂಡಾ ಹೊಂದಿದ್ದಾರೆ. ಇಂದಿನ ಹಣಕಾಸು ವ್ಯವಹಾರಕ್ಕನುಗುಣವಾಗಿ ಮಹಿಳೆಯರು ಮೊಬೈಲ್ ಬ್ಯಾಂಕಿಂಗ್, ಇಂಟರ್‌ನೆಟ್ ಬ್ಯಾಂಕಿಂಗ್ ಸಹಿತ ಆಧುನಿಕತೆಗೆ ಹೊಂದಿಕೊಳ್ಳಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾಗೀರತಿ ವಹಿಸಿದ್ದರು.
ಮುಖ್ಯ ವಕ್ತಾರರಾಗಿ ಉಪಸ್ಥಿತರಿದ್ದ ನ್ಯಾಯವಾದಿ ಎಂ. ಟಿ. ನಾಯ್ಕ ಕಾನೂನು ಮಾಹಿತಿಯನ್ನು ನೀಡುತ್ತಾ ಜೀವನದಲ್ಲಿ ಪ್ರತಿ ಕ್ಷಣವೂ ಕೂಡಾ ನಮಗೆ ಕಾನೂನು ಅಗತ್ಯ. ಮಹಿಳೆಯರ ಕುರಿತು ಅನೇಕ ಕಾನೂನುಗಳು ರಚನೆಯಾಗಿದ್ದು ಮಹಿಳೆಯರ ರಕ್ಷಣೆ, ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ ಇತ್ಯಾದಿ ಸೇರಿದಂತೆ ಅನೇಕ ಕಾನೂನುಗಳು ರಚನೆಯಾಗಿವೆ. ಮಹಿಳೆಯರಿಗೆ ಯಾವುದೇ ಸಂದರ್ಭದಲ್ಲಿ ಉಚಿತ ಕಾನೂನು ನೆರವು ದೊರೆಯುವುದರೊಂದಿಗೆ ವಿಶೇಷ ರಿಯಾಯಿತಿಗಳೂ ಇದೆ ಎಂದರು.
ವೃದ್ಧ ತಂದೆ-ತಾಯಿಗಳನ್ನು ಮಕ್ಕಳು ನೋಡಿಕೊಳ್ಳದಿದ್ದರೆ ಅವರೂ ಕೂಡಾ ಕಾನೂನಿನ ಮೊರೆ ಹೋದಲ್ಲಿ ಅವರಿಗೆ ಜೀವನಾಂಶವನ್ನು ಪಡೆಯಲು ಸಾಧ್ಯವಾಗುವುದು. ವರದಕ್ಷಿಣೆ ಕಿರುಕುಳದ ಪ್ರಸಂಗಗಳಲ್ಲಿ ಅಪರಾಧಿಗೆ ಶಿಕ್ಷೆಯಾಗುವುದು, ಕೆಲವೊಂದು ಪ್ರಕರಣಗಳಲ್ಲಿ ಸರಿಯಾಗಿ ಸಾಕ್ಷಿ ನುಡಿಯದೇ ಇದ್ದಲ್ಲಿ ಮಾತ್ರ ಅಪರಾಧಿ ತಪ್ಪಿಸಿಕೊಳ್ಳಲು ಸಾಧ್ಯ. ಹಲವಾರು ಸಂದರ್ಭದಲ್ಲಿ ಮನೆಯಲ್ಲಿನ ಚಿಕ್ಕ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವಾಗಬಹುದು ಅಂತಹ ಸಂದರ್ಭದಲ್ಲಿ ಮಕ್ಕಳಿಂದ ಮಾಹಿತಿ ಪಡೆದು ದೂರು ನೀಡಲು ಹಿಂಜರಿಯಬಾರದು. ಮಗು ಅಪ್ರಾಪ್ತೆಯಾಗಿದ್ದರೆ ಪೋಸ್ಕೋ ಕಾಯಿದೆಯಡಿಯಲ್ಲಿ ಅಪರಾಧಿಗೆ 7 ರಿಂದ 10 ವರ್ಷ ಶಿಕ್ಷೆಯಾಗುವುದು ಎಂದ ಅವರು ಹಲವಾರು ಬಾರಿ ನ್ಯಾಯಾಲಯವು ಕೆಲವೊಂದು ಪ್ರಕರಣಗಳಲ್ಲಿ ಸುಳ್ಳು ದೂರು ದಾಖ ಲಾಗಿರುವುದನ್ನು ಮನಗಂಡಿದೆ. ಯಾವುದೇ ಮಹಿಳೆಯರು ಮಾನಭಂಗದಂತಹ ಗಂಭೀರವಾದ ಪ್ರಕರಣವನ್ನು ಯಾವುದೋ ಒಂದು ಧ್ವೇಷ ಸಾಧನೆಗೆ ಬಳಸಿಕೊಳ್ಳದಂತೆ ಕರೆ ನೀಡಿದರು.
ವಿವಾಹ ವಿಚ್ಚೇದನಕ್ಕೆ ಸಂಬಂಧ ಪಟ್ಟಂತೆ ಸಂಪೂರ್ಣ ವಿವರವನ್ನು ನೀಡಿದ ಅವರು ಎರಡನೇ ವಿವಾಹವೆಂದೂ ಸಿಂಧುವಾಗದು ಎಂದು ಹೇಳಿದರು. ಮೊದಲ ಪತ್ನಿಯು ಜೀವಂತವಾಗಿರುವಾಗ ಇಲ್ಲವೇ ಅವಳಿಂದ ವಿಚ್ಚೇದನ ಪಡೆಯದೇ ಇರುವವರಿಗೆ ತಮ್ಮ ಮಕ್ಕಳನ್ನು ಕೊಟ್ಟು ಮದುವೆ ಮಾಡದಂತೆಯೂ ತಿಳಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಯೋಜನೆಯ ಮೇಲ್ವಿಚಾರಕ ಭರತ್, ತಾಂತ್ರಿಕ ಸಂಯೋಜಕ ಮಾದೇವ ನಾಯ್ಕ ತಾಂತ್ರಿಕ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ತ್ರಿವೇಣಿ, ವಿಮಲಾ, ರೇಖಾ, ಕಮಲಾ, ರೇಷ್ಮಾ ಮುಂತಾದವರು ಉಪಸ್ಥಿತರಿದ್ದರು. ಯೋಜನೆಯ ಮೇಲ್ವಿಚಾರಕಿ ನಾಗವೇಣಿಯವರು ಕಾರ್ಯಕ್ರಮ ಸಂಯೋಜಿಸಿ, ವಂದಿಸಿದರು