ಮಂಗಳೂರಿನಲ್ಲಿ ಗುಡ್ ಫ್ರೈಡೆ ಆಚರಣೆ: ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ
ಮಂಗಳೂರು, ಮಾ. 30: ಕ್ರೈಸ್ತ ಸಮುದಾಯದ ಪವಿತ್ರ ದಿನ ಗುಡ್ ಫ್ರೈಡೇ ದಿನ ಜಿಲ್ಲೆಯ ಎಲ್ಲಾ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆಗಳು ನಡೆದವು. ಯೇಸು ಕ್ರಿಸ್ತ ಬಂಧನಕ್ಕೆ ಒಳಗಾಗುವುದರಿಂದ ಹಿಡಿದು ಶಿಲುಬೆಗೆ ಏರುವವರೆಗಿನ ಘಟನೆಗಳನ್ನು 14 ಭಾಗಗಳಾಗಿ ವಿಂಗಡಿಸಿ, ಪ್ರತಿಯೊಂದು ಭಾಗವನ್ನೂ ಅವಲೋಕಿಸುತ್ತಾ ಪ್ರಾರ್ಥಿಸುವ ಮೂಲಕ ಶುಕ್ರವಾರ ದಿವನ್ನು ವಿಶೇಷವಾಗಿ ಆಚರಿಸಲಾಯಿತು.
ಶುಕ್ರವಾರ ನಗರದ ಮಿಲಾಗ್ರಿಸ್ ಚರ್ಚ್‌ನಲ್ಲಿ ಶಿಲುಬೆಯ ಹಾದಿ ಆಚರಣೆಯನ್ನು ನಡೆಸುವ ಮೂಲಕ ಏಸುಕ್ರಿಸ್ತರು ಅನುಭವಿಸಿದ ಕಷ್ಟಗಳನ್ನು ಕ್ರೈಸ್ತರು ಸ್ಮರಿಸಿಕೊಂಡರು. ಜಿಲ್ಲೆಯ ವಿವಿಧ ಚರ್ಚ್‌ಗಳಲ್ಲಿ ಕ್ರೈಸ್ತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ನಗರದ ರೋಸಾರಿಯೊ ಕೆಥೆಡ್ರಲ್‌ನಲ್ಲಿ ನಡೆದ ಶಿಲುಬೆಯ ಹಾದಿ ಆಚರಣೆ ಮತ್ತು ಪ್ರಾರ್ಥನಾ ಕಾರ್ಯಕ್ರಮದ ನೇತೃತ್ವವನ್ನು ಮಂಗಳೂರು ಧರ್ಮ ಪ್ರಾಂತ್ಯದ ಅಧ್ಯಕ್ಷ ರೆ.ಫಾ. ಅಲೋಶಿಯಸ್ ಪಾವ್ಲ್ ಡಿಸೋಜ ವಹಿಸಿದ್ದರು.
ಏಸು ಅನುಭವಿಸಿದ ಕಷ್ಟಗಳ ಸ್ಮರಣೆಯು, ನಮಗೆ ನಮ್ಮ ಸಂಕಷ್ಟಗಳನ್ನು ಸಹಿಸಲು ಹಾಗೂ ದ್ವೇಷ, ಅಸೂಯೆಗಳನ್ನು ತೊರೆದು ಸನ್ಮಾರ್ಗದಲ್ಲಿ ನಡೆಯಲು ಸ್ಫೂರ್ತಿ ನೀಡಲಿ ಎಂದು ಅವರು ಆಶಿಸಿದರು.