×
Ad

ಅಡಿಕೆಯಲ್ಲಿ ಕ್ಯಾನ್ಸರ್‌ಕಾರಕ ಅಂಶವಿಲ್ಲ: ಅನಂತ್ ಕುಮಾರ್ ಹೆಗಡೆ

Update: 2018-03-31 18:28 IST

ಮಂಗಳೂರು, ಮಾ.31: ಅಡಿಕೆಯಲ್ಲಿ ಕ್ಯಾನ್ಸರ್‌ಕಾರಕ ಅಂಶವಿಲ್ಲ ಎಂಬುದು ಸಾಬೀತುಗೊಂಡಿದ್ದು, ಈ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದ ಸಂಶೋಧಕರು ತಯಾರಿಸಿರುವ ವರದಿಯನ್ನು ಎಪ್ರಿಲ್ 4ರಂದು ಕೇಂದ್ರ ಆರೋಗ್ಯ ಸಚಿವರಿಗೆ ಸಲ್ಲಿಸಲಾಗುವುದು ಎಂದು ಕೇಂದ್ರದ ಕೌಶಲಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ.

ಬಿಜೆಪಿ ಕಚೇರಿಗೆ ಭೇಟಿ ನೀಡಿದ ವೇಳೆ ಸುದ್ದಿಗಾರರ ಜತೆ ಮಾತನಾಡಿ ಈ ವಿಷಯ ತಿಳಿಸಿದ ಅವರು, ಅಡಿಕೆಯಲ್ಲಿ ಕ್ಯಾನ್ಸರ್‌ಕಾರಕ ಅಂಶಗಳಿವೆ ಎಂಬ ಬಗ್ಗೆ ಹಲವು ವರ್ಷಗಳಿಂದ ಚರ್ಚೆಯಾಗುತ್ತಿತ್ತು. ಆದರೆ ಅಂತಾರಾಷ್ಟ್ರೀಯ ಸಂಶೋಧನೆಯ ಪ್ರಕಾರ ಅಡಿಕೆಯು ಔಷಧೀಯ ಗುಣವಿರುವ ವಸ್ತು ಎಂಬುದು ದೃಢಪಟ್ಟಿದೆ. ಈ ಬಗ್ಗೆ ಅಧಿಕೃತವಾಗಿ ಚರ್ಚೆ ಬೇರೆ ಹಂತಗಳಲ್ಲಿ ನಡೆದಿರಲಿಲ್ಲ. 15 ದಿನಗಳ ಹಿಂದೆ ಸಂಸದರು, ಅಡಿಕೆ ಮಾರಾಟಗಾರರ ಸಂಘಗಳ ಒಕ್ಕೂಟ, ಕ್ಯಾಂಪ್ಕೋ, ಮ್ಯಾಂಪ್ಕೋ ಸೇರಿದಂತೆ ಆರೋಗ್ಯ ಸಚಿವರನ್ನು ಭೇಟಿಯಾಗಿ ಈ ಬಗ್ಗೆ ಮನವರಿಕೆ ಮಾಡಲಾಗಿದೆ. ಅಡಿಕೆ ಮೂಲತ: ಔಷಧೀಯ ಗುಣವಿರುವ ವಸ್ತು ಎಂಬುದನ್ನು ಚರ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ನಿರ್ದೇಶನದ ಮೇರೆಗೆ ನಡೆದ ಅಂತಾರಾಷ್ಟ್ರೀಯ ಮಟ್ಟದ ಸಂಶೋಧನೆಯ ವರದಿ ಕೈ ಸೇರಿದ್ದು, ಅದನ್ನು ಆರೋಗ್ಯ ಮತ್ತು ಕೃಷಿ ಮತ್ತು ಇತರ ಸಂಶೋಧನಾ ಸಂಸ್ಥೆಗಳಿಗೆ ಭೇಟಿಯಾಗಿ ನೀಡಲಿದ್ದೇವೆ. ಈ ನಡುವೆ, ಅಡಿಕೆ ಬೆಳೆಗಾರರು ಹಾಗೂ ಮಾರಾಟಗಾರರ ಮಧ್ಯೆ ಗೊಂದಲ ಸೃಷ್ಟಿ ಮಾಡುವ ಕೆಲಸ, ಉತ್ತರ ಭಾರತದಲ್ಲಿ ಅಡಿಕೆ ಬಗ್ಗೆ ತಿಳಿಯದೆ ಇಲ್ಲಿ ಬಂದು ಹೇಳಿಕೆ ನೀಡುವ ಮೂಲಕ ನಡೆಯುತ್ತಿದೆ. ಈ ಬಗ್ಗೆ ಅಡಿಕೆ ಬೆಳೆಗಾರರು ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ. ಶೀಘ್ರದಲ್ಲೇ ಸಂಶೋಧನೆಯ ವರದಿಯಿಂದ ಗೊಂದಲ ಪರಿಹಾರವಾಗಲಿದೆ ಎಂದು ಅವರು ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News