×
Ad

ಕಾವೇರಿ ನಿರ್ವಹಣಾ ಮಂಡಳಿ ರಚನೆ: ಕೇಂದ್ರದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ತಮಿಳುನಾಡು

Update: 2018-03-31 20:27 IST

ಹೊಸದಿಲ್ಲಿ, ಮಾ. 31: ಸುಪ್ರೀಂ ಕೋರ್ಟ್‌ನ ಆದೇಶದಂತೆ ಕಾವೇರಿ ನಿರ್ವಹಣಾ ಮಂಡಳಿ (ಸಿಎಂಬಿ) ರೂಪಿಸಲು ವಿಫಲವಾದ ಕೇಂದ್ರ ಸರಕಾರದ ವಿರುದ್ಧ ತಮಿಳುನಾಡು ಸರಕಾರ ಶನಿವಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ತಮಿಳುನಾಡು ಸರಕಾರ ಕೇಂದ್ರ ಸರಕಾರದ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದೆ. ಈ ವಿಷಯವನ್ನು ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಸ್ತಾಪಿಸಲಿದೆ ಎಂದು ತಮಿಳುನಾಡು ಸರಕಾರದ ಪರ ವಕೀಲೆ ಉಮಾ ಪಾಟಿ ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್ ಕಾವೇರಿ ನಿರ್ವಹಣಾ ಮಂಡಳಿ ರೂಪಿಸಲು ಕೇಂದ್ರ ಸರಕಾರಕ್ಕೆ ನೀಡಿದ ಆರು ವಾರಗಳ ಅಂತಿಮ ಗಡುವು ಗುರುವಾರ ಪೂರ್ಣಗೊಳ್ಳಲಿದೆ. ಈ ನಡುವೆ, ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ನಲ್ಲಿ ಸ್ಪಷ್ಟೀಕರಣ ಅರ್ಜಿ ಸಲ್ಲಿಸಿದೆ ಹಾಗೂ ಕಾವೇರಿ ನಿರ್ವಹಣಾ ಮಂಡಳಿಯ ಸಂಯೋಜನೆ ಮಾರ್ಪಡಿಸಲು ಸಾಧ್ಯವೇ ಎಂದು ಸ್ಪಷ್ಟನೆ ನೀಡುವಂತೆ ಮನವಿ ಮಾಡಿದೆ. ಫೆಬ್ರವರಿ 16ರ ಆದೇಶ ಅನುಷ್ಠಾನಗೊಳಿಸಲು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ನಿಂದ ಇನ್ನಷ್ಟು ಕಾಲಾವಕಾಶ ಕೋರಿದೆ. ಮಾಧ್ಯಮಗಳೊಂದಿಗೆ ಶುಕ್ರವಾರ ಮಾತನಾಡಿದ ಕೆ. ಪಳನಿಸ್ವಾಮಿ, ಕಾವೇರಿ ನಿರ್ವಹಣಾ ಮಂಡಳಿ ರೂಪಿಸುವುದನ್ನು ರಾಜ್ಯ ಸರಕಾರ ಕಾನೂನುಬದ್ದವಾಗಿ ಮುಂದುವರಿಸಲಿದೆ ಎಂದಿದ್ದಾರೆ.

‘‘ಕಾವೇರಿ ನಿರ್ವಹಣಾ ಮಂಡಳಿ ಕುರಿತಂತೆ ಸಂಸತ್ತಿನ 17 ದಿನಗಳನ್ನು ನಾವು ವ್ಯರ್ಥ ಮಾಡಿದೆವು. ರಾಜ್ಯದ ಕಾರಣಕ್ಕಾಗಿ ಇದು ಸಂಭವಿಸಬಾರದು’’ ಎಂದು ಪಳನಿಸ್ವಾಮಿ ಹೇಳಿದರು. ಕೇಂದ್ರ ಸರಕಾರ ಈ ಯೋಜನೆ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಎಪ್ರಿಲ್ 2ರಂದು ತಮಿಳುನಾಡಿನಾದ್ಯಂತ ಉಪವಾಸ ಸತ್ಯಾಗ್ರಹ ನಡೆಸಲು ಎಐಎಡಿಎಂಕೆ ಪಕ್ಷದ ಸದಸ್ಯರು ನಿರ್ಧರಿಸಿದ್ದಾರೆ. ಆದೇಶ ಜಾರಿಗೊಳಿಸದ ಕೇಂದ್ರ ಸರಕಾರವನ್ನು ಡಿಎಂಕೆ ಹಾಗೂ ಮೂಲೆಗುಂಪಾದ ಎಐಎಡಿಎಂಕೆ ನಾಯಕ ಟಿಟಿವಿ ದಿನಕರನ್ ಕೂಡ ಖಂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News