×
Ad

ಉಪ್ಪಿನಂಗಡಿ: ಅಡಿಕೆ ಕಳವು ಪ್ರಕರಣ; ಆರೋಪಿ ಸೆರೆ

Update: 2018-03-31 20:27 IST

ಉಪ್ಪಿನಂಗಡಿ, ಮಾ. 31: ಅಡಿಕೆ ಕಳವು ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಬಂಧಿಸಿದ ಉಪ್ಪಿನಂಗಡಿ ಠಾಣೆ ಪೊಲೀಸರು ಕಾರು ಸಮೇತ ಸೊತ್ತು ವಶಕ್ಕೆ ಪಡೆದುಕೊಂಡಿದ್ದಾರೆ.

ಇನ್ನೋರ್ವ ಆರೋಪಿ ಪೊಲೀಸ್ ಕಾರ್ಯಾಚರಣೆ ಸಂದರ್ಭ ಓಡಿ ತಪ್ಪಿಸಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ. ವಾರದೊಳಗೆ ಕಳವು ಪ್ರಕರಣವನ್ನು ಪತ್ತೆ ಹಚ್ಚಿದ ಉಪ್ಪಿನಂಗಡಿ ಪೊಲೀಸರು ಈ ಕಾರ್ಯ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.

ಕೌಕ್ರಾಡಿ ಗ್ರಾಮದ ನೆಲ್ಯಾಡಿ ಬಳಿಯ ಕುಂಡಡ್ಕ ನಿವಾಸಿ ಸರ್ಫ್‌ರಾಜ್ ಯಾನೆ ಹುಸೈನ್ ಸರ್ಫ್‌ರಾಜ್ (30) ಬಂಧಿತ ಆರೋಪಿ. ಈ ಪ್ರಕರಣದ ಇನ್ನೋರ್ವ ಪ್ರಮುಖ ಆರೋಪಿ ಸರ್ಫ್‌ರಾಜ್‌ನ ನೆರೆಮನೆಯವನಾದ ಅಶ್ಫಾಕ್ ಎಂಬಾತ ಪೊಲೀಸರ ಕಾರ್ಯಾಚರಣೆ ಸಂದರ್ಭ ಓಡಿ ತಪ್ಪಿಸಿಕೊಂಡಿದ್ದಾನೆ. ಮಠದ ಕೆರೆಮೂಲೆ ನಿವಾಸಿ ಮುಹಮ್ಮದ್ ಹನೀಫ್ ಎಂಬವರ ನೆಲ್ಯಾಡಿಯಲ್ಲಿರುವ ಎಚ್.ಎನ್. ಸುಪಾರಿ ಟ್ರೇಡರ್ಸ್‌ನಿಂದ ಮಾ.25ರಂದು ರಾತ್ರಿ ಅಂಗಡಿಯ ಮಾಡಿನ ಹಂಚು ತೆಗೆದು ಇವರು ಅಡಿಕೆ ಕಳವುಗೈದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ದ.ಕ. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರವೀಕಾಂತೇ ಗೌಡ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಜಿತ್ ಕುಮಾರ್, ಪುತ್ತೂರು ಉಪವಿಭಾಗದ ಡಿವೈಎಸ್ಪಿ ಶ್ರೀನಿವಾಸ ಅವರ ಮಾರ್ಗದರ್ಶನದಲ್ಲಿ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಎಂ. ಗೋಪಾಲ ನಾಯ್ಕ ಹಾಗೂ ಉಪ್ಪಿನಂಗಡಿ ಪೊಲೀಸ್ ಠಾಣಾ ಉಪ ನಿರೀಕ್ಷಕ ನಂದಕುಮಾರ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಹರೀಶ್ಚಂದ್ರ, ಪ್ರವೀಣ್ ರೈ, ಜಗದೀಶ್, ಇರ್ಷಾದ್, ಶ್ರೀಧರ್, ಚಾಲಕ ನಾರಾಯಣ ಗೌಡ ಮತ್ತು ನೆಲ್ಯಾಡಿ ಹೊರಠಾಣಾ ಎಎಸ್‌ಐ ಚೆನ್ನಪ್ಪ ಗೌಡ ಮತ್ತು ಸಿಬ್ಬಂದಿ ಶೇಖರ ಗೌಡ ಹಾಗೂ ದ.ಕ. ಜಿಲ್ಲಾ ಗಣಕ ಯಂತ್ರ ಸಿಬ್ಬಂದಿಗಳಾದ ಸಂಪತ್ ಮತ್ತು ದಿವಾಕರ್ ಭಾಗವಹಿಸಿದ್ದರು. ಈ ಪ್ರಕರಣವನ್ನು ಶೀಘ್ರವಾಗಿ ಬೇಧಿಸಿದ ತಂಡಕ್ಕೆ ಇಲಾಖಾ ಮೇಲಾಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News