×
Ad

ಉಡುಪಿ: ಮತದಾರರ ಜಾಗೃತಿಗೆ ಸ್ವೀಪ್ ಮೂಲಕ ವಿಶೇಷ ಪ್ರಯತ್ನ

Update: 2018-03-31 20:58 IST

ಉಡುಪಿ, ಮಾ.31: ಜಿಲ್ಲಾಡಳಿತದ ಸ್ವೀಪ್ ಸಮಿತಿ ವತಿಯಿಂದ ಮತದಾನ ಕುರಿತಂತೆ ಜಾಗೃತಿ ಮೂಡಿಸಲು ಮತ್ತು ಮತದಾನದ ಪ್ರಮಾಣ ಹೆಚ್ಚಿಸಲು ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದ್ದು, ಹಂತಹಂತವಾಗಿ ಅವುಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ಪ್ರತಿಜ್ಞಾ ವಿಧಿ, ಮಾಹಿತಿ ನೀಡಿಕೆ ಮತ್ತು ಕಾರ್ಯಗಾರಗಳನ್ನು ಎಲ್ಲಾ ಇಲಾಖಾಧಿಕಾರಿಗಳಿಗೆ ಆಯೋಜಿಸಿ ತರಬೇತಿ ನೀಡಲಾಗಿದ್ದು, ತಾಲೂಕು ಹಾಗೂ ಗ್ರಾಮಮಟ್ಟದ ಕಾರ್ಯಕ್ರಮಗಳನ್ನು ಈಗ ಹಮ್ಮಿಕೊಳ್ಳಲಾಗುತ್ತಿದೆ.

ಪ್ರತಿ ಮತಗಟ್ಟೆಯಲ್ಲಿ ಮತಗಟ್ಟೆ ಜಾಗೃತ ಸಮಿತಿಯನ್ನು ರಚಿಸಿ ಮತದಾರರಿಗೆ ಮಾಹಿತಿಯನ್ನು ನೀಡುವುದರ ಮೂಲಕ ಸಾರ್ವಜನಿಕ ಅರಿವಿಗೆ ಮಹತ್ವ ನೀಡಲಾಗುತ್ತಿದೆ. ವಿಶೇಷ ಚೇತನರಿಗೆ ಮಾಹಿತಿಯೊಂದಿಗೆ ಸೌಲ್ಯಗಳ ಕುರಿತು ತಿಳಿಸಲು ಕರಪತ್ರ, ಸಹಾಯವಾಣಿ ಮುಂತಾದ ಕಾರ್ಯ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಸಾಮಾಜಿಕ ಜಾಲತಾಣಗಳ ಮೂಲಕ ಮತದಾನದ ಮಹತ್ವದ ಕುರಿತು ಯುವ ಮತದಾರರಿಗೆ ಮತ್ತು ಮಿಲೇನಿಯಂ ಮತದಾರರಿಗೆ ಪ್ರೇರಣೆ ನೀಡಲಾಗುತ್ತಿದೆ. ವಿವಿಧ ಕ್ಷೇತ್ರಗಳ ಸಾಧಕರಿಂದ ಜಾಗೃತಿ ಸಂದೇಶಗಳನ್ನು ಮತ್ತು ವಿದ್ಯಾರ್ಥಿಗಳಿಂದ ಪೋಷಕರಿಗೆ ಮತದಾನ ಮಾಡುವಂತೆ ಅಂಚೆ ಕಾರ್ಡ್ ಬರೆಸುವ ಮೂಲಕ, ತುಳು ಹಾಗೂ ಕನ್ನಡ ಜಾನಪದ ಶೈಲಿಯ ಹಾಡುಗಳ ಮೂಲಕ ಮತದಾರರನ್ನು ಸೆಳೆಯಲು ಉಡುಪಿ ಜಿಲ್ಲೆಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.

ಮುಂದಿನ ಹಂತದಲ್ಲಿ ಬೃಹತ್ ಜಾಥಾ, ಕಾರ್ಮಿಕರ ಭೇಟಿ ಮಾಡಿ ಅರಿವು ಮೂಡಿಸುವುದು, ಸರಕಾರಿ ವಾಹನಗಳಲ್ಲಿ ಜಾಗೃತಿ ಕಾರ್ಯಕ್ರಮ ಹಾಗೂ ಎಸ್‌ಎಲ್‌ಆರ್‌ಎಂ ಕಾರ್ಯಕರ್ತರ ಮೂಲಕ ಮನೆ ಮನೆಗೆ ಮಾಹಿತಿ ರವಾನೆ ಮಾಡುವ ಯೋಜನೆಯನ್ನು ರೂಪಿಸಲಾಗಿದೆ. ಈ ಸಂದರ್ಭದಲ್ಲಿ ಸಾರ್ವಜನಿಕರು ಮತದಾನ ಜಾಗೃತಿ ಅಭಿಯಾನವನ್ನು ಯಶಸ್ವಿಗೊಳಿಸಲು ಸಹಕರಿಸುವಂತೆ ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News