ಕಾನೂನು ವಾಣಿಜ್ಯ ಕ್ಷೇತ್ರವಾಗದಿರಲಿ: ಸುಪ್ರೀಂ ಕೋರ್ಟ್ ನ್ಯಾಯಾಧೀಶ ಅಬ್ದುಲ್ ನಝೀರ್
ಮಂಗಳೂರು, ಮಾ. 31: ಕಾನೂನು ಮಾರ್ಗ ವಾಣಿಜ್ಯ ಕ್ಷೇತ್ರವಾಗಬಾರದು. ಅದು ಸೇವಾ ಕ್ಷೇತ್ರವಾಗಿಯೇ ಬೆಳೆಯುವಂತಾಗಬೇಕು ಎಂದು ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಅಬ್ದುಲ್ ನಝೀರ್ ಆಶಿಸಿದ್ದಾರೆ.
ಆಕೃತಿ ಆಶಯ ಪಬ್ಲಿಕೇಷನ್ಸ್ ಪ್ರಕಟಿಸಿದ ಹಿರಿಯ ನ್ಯಾಯವಾದಿ ತೋನ್ಸೆ ನಾರಾಯಣ ಪೂಜಾರಿ ಅವರ ಅನುಭವ ಕಥನ ‘ಕಾನೂನು ಪೀಠದ ಒಲುಮೆಯ ಒಸರುಗಳು’ ಕೃತಿಯನ್ನು ನಗರದ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಶನಿವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ನ್ಯಾಯಾಧೀಶರು ತಮ್ಮ ಸೇವೆಯ ಜೊತೆಗೆ ಇತರ ಚಟುವಟಿಕೆ ಇಟ್ಟುಕೊಳ್ಳುವುದು ಸರಿಯಲ್ಲ. ಪೂರ್ಣಕಾಲಿಕ ಸೇವೆಯನ್ನು ಮಾಡಬೇಕು. ಅರೆಕಾಲಿಕ ಸೇವೆ ನಡುವೆ ಇತರ ಚಟುವಟಿಕೆ ಮಾಡಬಾರದು. ಇತರ ಯಾವ ಕೆಲಸಗಳಿದ್ದರೂ ನಿವೃತ್ತಿ ಬಳಿಕ ಮಾಡಬೇಕು ಎಂದು ಅಬ್ದುಲ್ ನಝೀರ್ ಸಲಹೆ ನೀಡಿದರು.
ಶ್ರಮ ಪಟ್ಟು ಶ್ರದ್ದೆಯಿಂದ ಅಭ್ಯಾಸ ಮಾಡಿದರೆ ಭವಿಷ್ಯದಲ್ಲಿ ಒಳ್ಳೆಯದು ಆಗುತ್ತದೆ ಎಂದು ನಾರಾಯಣಪೂಜಾರಿಯವರು ಹಲವು ದೃಷ್ಟಾಂತಗಳ ಮೂಲಕ ತಮ್ಮ ಕೃತಿಯಲ್ಲಿ ವಿವರಿಸಿದ್ದಾರೆ. ಎಲ್ಲರ ಗೌರವಕ್ಕೆ ಪಾತ್ರರಾಗುವ ನ್ಯಾಯಾಧೀಶರು ಹೇಗೆ ಇರುತ್ತಾರೆ ಎಂಬುದನ್ನೂ ಕೂಡ ಅನುಭವಗಳ ಮೂಲಕ ಅವರು ವಿವರಿಸಿದ್ದಾರೆ ಎಂದು ನ್ಯಾಯಾಧೀಶರು ಹೇಳಿದರು.
ಹಿರಿಯ ನ್ಯಾಯವಾದಿ ತೋನ್ಸೆ ನಾರಾಯಣ ಪೂಜಾರಿ ಮಾತನಾಡಿ, ನ್ಯಾಯಾಧೀಶರೆಂದರೆ ಕಾನೂನಿನ ಚೌಕಟ್ಟಿನಲ್ಲೇ ತೀರ್ಪು ನೀಡಬೇಕು ಎಂಬ ಅಭಿಪ್ರಾಯವನ್ನು ನಾನು ಮೊದಲು ಹೊಂದಿದ್ದೆ. ಆದರೆ ನ್ಯಾಯಾಧೀಶರು ಕೂಡ ಕರುಣೆ, ವಾತ್ಸಲ್ಯಗಳಿಂದ ಹೊರತಾಗಿಲ್ಲ ಎನ್ನುವುದನ್ನು ಹಲವು ದೃಷ್ಟಾಂತಗಳಿಂದ ಕಂಡುಕೊಂಡಿದ್ದೇನೆ. ಇಂತಹ ಅನುಭವಗಳನ್ನು ಕೃತಿಯಲ್ಲಿ ಹಂಚಿಕೊಂಡಿದ್ದೇನೆ ಎಂದರು.
ಮಾಜಿ ಅಡ್ವಕೇಟ್ ಜನರಲ್ ಡಾ.ಬಿ.ವಿ.ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಡಾ.ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಅತಿಥಿಯಾಗಿದ್ದರು. ಲೇಖಕ ತೋನ್ಸೆ ನಾರಾಯಣ ಪೂಜಾರಿ ಸ್ವಾಗತಿಸಿದರು. ಶಶಿರಾಜ್ ರಾವ್ ಕಾವೂರು ಕಾರ್ಯಕ್ರಮ ನಿರ್ವಹಿಸಿದರು.