ಭಯೋತ್ಪಾದಕರಿಂದ ವಿಶೇಷ ಪೊಲೀಸ್ ಅಧಿಕಾರಿಯ ಹತ್ಯೆ
Update: 2018-03-31 22:39 IST
ಶ್ರೀನಗರ,ಮಾ.31: ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಮುರಾನ್ ಚೌಕ್ ಎಂಬಲ್ಲಿ ಶನಿವಾರ ಸಂಜೆ ಭಯೋತ್ಪಾದಕರು ವಿಶೇಷ ಪೊಲೀಸ್ ಅಧಿಕಾರಿ(ಎಸ್‌ಪಿಒ)ಯನ್ನು ಹತ್ಯೆ ಮಾಡಿದ್ದಾರೆ.
ಭಯೋತ್ಪಾದಕರು ತೀರ ಹತ್ತಿರದಿಂದ ಎಸ್‌ಪಿಒ ಮುಹಮ್ಮದ್ ಅಶ್ರಫ್ ಅವರ ಮೇಲೆ ಗುಂಡು ಹಾರಿಸಿದ್ದು, ತೀವ್ರವಾಗಿ ಗಾಯಗೊಂಡಿದ್ದ ಅವರು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಬೆಳಿಗ್ಗೆ ಅನಂತನಾಗ್‌ನ ಖನಬಾಲ್ ಪ್ರದೇಶದಲ್ಲಿ ಭಯೋತ್ಪಾದಕರು ತ್ರಿಲೋಕ ಸಿಂಗ್ ಎಂಬ ಇನ್ನೋರ್ವ ಎಸ್‌ಪಿಒ ಮೇಲೆ ಗುಂಡು ಹಾರಿಸಿದ್ದು, ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುರುವಾರ ಅನಂತನಾಗ್‌ನ ಬಿಜ್‌ಬೆಹ್ರಾ ಪ್ರದೇಶದಲ್ಲಿ ಎಸ್‌ಪಿಒ ಮುಷ್ತಾಕ್ ಅಹ್ಮದ್ ಶೇಖ್ ಅವರನ್ನು ಭಯೋತ್ಪಾದಕರು ಗುಂಡು ಹಾರಿಸಿ ಹತ್ಯೆಗೈದಿದ್ದರು. ಈ ಸಂದರ್ಭ ಅವರ ಜೊತೆಯಲಿದ್ದ ಪತ್ನಿ ತೀವ್ರವಾಗಿ ಗಾಯಗೊಂಡಿದ್ದರು.