×
Ad

ಎಂಪಿಎಲ್ ಕ್ರಿಕೆಟ್: ಫೈನಲಿಗೆ ಜಿಗಿದ ಮಂಗಳೂರು ಯುನೈಟೆಡ್

Update: 2018-04-01 18:06 IST

ಮಂಗಳೂರು, ಎ.1: ಬ್ರಾಂಡ್ ವಿಷನ್ ಈವೆಂಟ್ಸ್, ಮಂಗಳೂರು ಆಕೇಶನಲ್ಸ್ ಕ್ರೀಡಾ ಸಂಸ್ಥೆ ಮತ್ತು ಸಿ ಬರ್ಡ್ ಕ್ರಿಕೆಟ್ ಅಕಾಡಮಿ ಸಂಸ್ಥೆಗಳು ರಾಜ್ಯ ಕ್ರಿಕೆಟ್ ಸಂಸ್ಥೆಯ ಅನುಮೋದನೆಯೊಂದಿಗೆ ಪಣಂಬೂರಿನ ನವಮಂಗಳೂರು ಬಂದರು ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ಡಿಎನ್‌ಐ ಮಂಗಳೂರು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದ ರೋಮಾಂಚಕ ಮುಕ್ತಾಯವನ್ನು ಕಂಡ ಎರಡನೆ ಸೆಮಿಫೈನಲ್ ಪಂದ್ಯದಲ್ಲಿ ಎರಡೂ ತಂಡಗಳು 20 ಓವರುಗಳಲ್ಲಿ 139 ರನ್‌ಗಳ ಸಮಾನ ಮೊತ್ತವನ್ನು ಪಡೆದು ಜಯ ನಿರ್ಣಯಕ್ಕಾಗಿ ಸೂಪರ್ ಓವರ್‌ನಲ್ಲೂ ಮುಂದುವರಿದ ರೋಮಾಂಚಕ ಹೋರಾಟದಲ್ಲಿ ಮಂಗಳೂರು ಯುನೈಟೆಡ್ ತಂಡವು ಟಿ4 ಸೂಪರ್‌ಕಿಂಗ್ಸ್ ತಂಡವನ್ನು ಮಗುಚಿ ಫೈನಲ್ ಪ್ರವೇಶಿಸಿತು.

ಯುನೈಟೆಡ್‌ಗೆ ಸೂಪರ್ ಓವರ್ ಜಯ

ಮೊದಲು ಬ್ಯಾಟಿಂಗ್ ನಡೆಸಿದ ಮಂಗಳೂರು ಯುನೈಟೆಡ್ ತಂಡವು ಪ್ರವೀಣ್ ದುಬೆಯ 5 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡ 65 ರನ್ ಹಾಗೂ ಮೋಹಿತ್‌ರ 24 ರನ್‌ಗಳ ನೆರನಿಂದ 20 ಓವರುಗಳಲ್ಲಿ 139 ರನ್‌ಗಳ ಸಾಧಾರಣ ಮೊತ್ತವನ್ನು ಗಳಿಸಿತು. ಸೂಪರ್ ಕಿಂಗ್ಸ್‌ನ ಶ್ರೀಷ (28ಕ್ಕೆ 3), ಅಬ್ದುಲ್ ಮಜೀದ್ (20ಕ್ಕೆ 3) ಮಂಗಳೂರು ಯುನೈಟೆಡ್‌ನ ರನ್‌ದಾಹಕ್ಕೆ ಕಡಿವಾಣ ಹಾಕುವಲ್ಲಿ ಯಶ ಕಂಡರು. ಮೊಹ್ತೆಶ್ಯಾಂ 18ಕ್ಕೆ 2, ಅಸ್ಜತ್ 18ಕ್ಕೆ 1ವಿಕೆಟ್ ಪಡೆದರು.

ಬಾಲಕ ಮ್ಯಾಕ್ನಿಲ್ ಅರ್ಧ ಶತಕ

ಯುನೈಟೆಡ್ ಉಳ್ಳಾಲದ ಬೌಲರ್‌ಗಳಾದ ಚಿರಂಜೀವಿ ಮತ್ತು ರಾಜೇಶ್ ಆಚಾರ್ಯ ಟಿ4ನ ಮೊತ್ತ 17 ಆಗುವಷ್ಟರಲ್ಲಿ ಮೂರು ಪ್ರಮುಖ ದಾಂಡಿಗರಾದ ಫರಾನ್, ನಿಹಲ್ ಉಳ್ಳಾಲ್ ಮತ್ತು ವಿನಯ ಸಾಗರ್‌ರ ವಿಕೆಟ್ ಪಡೆದರು. ಬಳಿಕ ಜೆಸ್ವಂತ್ ಆಚಾರ್ಯರ ಜತೆಗೂಡಿದ 15 ವರ್ಷದ ಬಾಲಕ ಮ್ಯಾಕ್ನಿಲ್ ಆಕರ್ಷಕ ಬ್ಯಾಟಿಂಗ್ ನಡೆಸಿ ಅರ್ಧ ಶತಕ ಗಳಿಸಿದರು.

ಸೂಪರ್ ಓವರ್

ಜಯ ನಿರ್ಣಯಕ್ಕಾಗಿ ಜಾರಿಯಾದ ಸೂಪರ್ ಓವರಿನ ಪ್ರಥಮ ಚೆಂಡಿನಲ್ಲೇ ಟಿ4 ತಂಡದ ನೆಹಾಲ್ ಉಳ್ಳಾಲ್‌ರ ವಿಕೆಟ್ ಉರುಳಿತು. ಉಳಿದ ಒಂದು ವಿಕೆಟ್ ಸಹಾಯದಿಂದ ಟಿ4 ತಂಡವು ಒಂದು ಬೌಂಡರಿಯನ್ನೊಳಗೊಂಡ 6 ರನ್ ಗಳಿಸಿದರೆ ಮಂಗಳೂರು ಯುನೈಟೆಡ್ ಜಯಕ್ಕೆ ಬೇಕಾದ 7 ರನ್‌ಗಳನ್ನು ಯಾವುದೇ ವಿಕೆಟ್ ನಷ್ಟಲ್ಲದೆ ಗಳಿಸಿ ಫೈನಲ್ ಹಂತಕ್ಕೆ ನೆಗೆದೇರಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News