ಶಿರೂರು ಶ್ರೀಗೆ ಸೋದೆ ಮಠದಿಂದ ನೋಟಿಸ್

Update: 2018-04-01 12:51 GMT

ಉಡುಪಿ, ಎ.1: ಖಾಸಗಿ ಸುದ್ದಿವಾಹಿನಿಯಲ್ಲಿ ಉಡುಪಿ ಶ್ರೀಕೃಷ್ಣ ಮಠದ ಅಷ್ಟಮಠಾಧೀಶರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವ ಶಿರೂರು ಮಠಾಧೀಶ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರಿಗೆ ಶಿರೂರು ಮಠದ ದ್ವಂದ್ವ ಮಠವಾಗಿರುವ ಸೋದೆ ಮಠದಿಂದ ಸ್ಪಷ್ಟನೆ ಕೇಳಿ ನೋಟಿಸ್ ನೀಡಲಾಗಿದೆ.

ಮಾ.15ರಂದು ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯ ನೇತೃತ್ವದಲ್ಲಿ ಪರ್ಯಾಯ ಪಲಿಮಾರು, ಅದಮಾರು, ಕೃಷ್ಣಾಪುರ, ಕಾಣಿಯೂರು, ಸೋದೆ ಮಠಾಧೀಶರು ಸಭೆ ನಡೆಸಿ ಶಿರೂರು ಸ್ವಾಮೀಜಿ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿತ್ತು.

ಅದರಂತೆ ಶಿರೂರು ಮಠದ ದ್ವಂದ್ವ ಮಠವಾಗಿರುವ ಸೋದೆ ಮಠದಿಂದ ಶಿರೂರು ಸ್ವಾಮೀಜಿಗೆ ನೋಟಿಸ್ ನೀಡಿರುವುದಾಗಿ ತಿಳಿದುಬಂದಿದೆ. ಈ ವಿಚಾರವನ್ನು ಸೋದೆ ಮಠದ ಮೂಲಗಳು ಖಚಿತ ಪಡಿಸಿದ್ದು, ಮಾಹಿತಿ ಬಹಿರಂಗ ಪಡಿಸಲು ನಿರಾಕರಿಸಿದೆ.

ಶಿರೂರು ಸ್ವಾಮೀಜಿ ಖಾಸಗಿ ಸುದ್ದಿವಾಹಿನಿಯಲ್ಲಿ ಅಷ್ಟಮಠಾಧೀಶ ಎಲ್ಲರಿಗೂ ಮಕ್ಕಳಿದ್ದಾರೆ ಮತ್ತು ನನಗೂ ಮಕ್ಕಳಿದ್ದಾರೆ. ಮತ್ತು ಇತರ ಸ್ವಾಮೀಜಿಗಳಿಗೂ ಮಕ್ಕಳಿದ್ದಾರೆ. ಪರ್ಯಾಯ ಅಂದರೆ ಹಣ ಮಾಡುವ ಸ್ಕೀಮ್. ಹಿಂದಿನ ಸ್ವಾಮೀಜಿಯನ್ನು ವಿಷ ಹಾಕಿ ಕೊಲ್ಲಲಾಗಿದೆ ಎಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು.

‘ನನಗೆ ನೋಟೀಸ್ ನೀಡಲು ಅವರು ಯಾರು. ಈವರೆಗೆ ನನಗೆ ಯಾವುದೇ ನೋಟಿಸ್ ತಲುಪಿಲ್ಲ. ಖಾಸಗಿ ಚಾನೆಲ್‌ನಲ್ಲಿ ಬಂದ ವೀಡಿಯೊ ನನ್ನದಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ಈ ವಿಚಾರ ಇದೀಗ ನ್ಯಾಯಾಲಯದಲ್ಲಿದೆ. ನೋಟಿಸ್‌ಗೆ ಉತ್ತರ ನಮ್ಮ ವಕೀಲರು ನೀಡುತ್ತಾರೆ’ ಎಂದು ಶಿರೂರು ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News