ಮರಳು ಮಾಫಿಯಾ: ಉಡುಪಿ ಜಿಲ್ಲಾಧಿಕಾರಿ ಕೊಲೆಯತ್ನ ಪ್ರಕರಣಕ್ಕೆ ಒಂದು ವರ್ಷ
ಉಡುಪಿ, ಎ.1: ಕುಂದಾಪುರ ತಾಲೂಕಿನ ಕಂಡ್ಲೂರು ಎಂಬಲ್ಲಿ 2017ರ ಎ.2ರಂದು ರಾತ್ರಿ ಅಕ್ರಮ ಮರಳುಗಾರಿಕೆ ಕುರಿತು ಪರಿಶೀಲಿಸಲು ತೆರಳಿದ್ದ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಕುಂದಾಪುರ ಉಪ ವಿಭಾಗ ದಂಡಾಧಿಕಾರಿ ಶಿಲ್ಪಾ ನಾಗ್ ಸಹಿತ ಆರು ಮಂದಿಯ ಮೇಲೆ ಸ್ಥಳೀಯ ಸುಮಾರು 50 ಮಂದಿಯ ಗುಂಪು ದಾಳಿ ನಡೆಸಿ, ಕೊಲೆಗೆ ಯತ್ನಿಸಿರುವ ಪ್ರಕರಣಕ್ಕೆ ಒಂದು ವರ್ಷ ತುಂಬಿತು. ಪ್ರಕರಣದ ಆರೋಪ ಪಟ್ಟಿಯು ಇದೀಗ ಪರಿಶೀಲನೆ ಹಂತದಲ್ಲಿದ್ದು, ವಿಚಾರಣೆ ಇನ್ನೂ ನ್ಯಾಯಾಲಯದಲ್ಲಿ ಆರಂಭವಾಗಿಲ್ಲ.
ಹಳ್ನಾಡು ಮತ್ತು ಕಂಡ್ಲೂರಗಳಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಕುರಿತ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಕುಂದಾ ಪುರ ಎಸಿ ನೇತೃತ್ವದ ತಂಡ ರಾತ್ರಿ 11ಗಂಟೆಯ ಸುಮಾರಿಗೆ ಹಳ್ನಾಡ್‌ಗೆ ದಾಳಿ ನಡೆಸಿ, ಮರಳುಗಾರಿಕೆಯಲ್ಲಿ ತೊಡಗಿದ್ದ ಉತ್ತರ ಪ್ರದೇಶ ರಾಜ್ಯದ ಆರು ಮಂದಿ ಕಾರ್ಮಿಕರು, ಎರಡು ಮೊಬೈಲ್ ಮತ್ತು ದಾರಿಯಲ್ಲಿ ಅನುಮಾನಿತವಾಗಿ ಪತ್ತೆಯಾದ ಎರಡು ವಾಹನಗಳ ಕೀಗಳನ್ನು ವಶಕ್ಕೆ ಪಡೆದು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಮುಂದಿನ ಕ್ರಮಕ್ಕಾಗಿ ತಹಶೀಲ್ದಾರ್‌ಗೆ ಒಪ್ಪಿಸಿತ್ತು.
ಅಲ್ಲಿಂದ ತಂಡ ಕಂಡ್ಲೂರು ವಾರಾಹಿ ನದಿ ಬಳಿ ರಾತ್ರಿ 12:15ರ ಸುಮಾರಿಗೆ ಅಕ್ರಮ ಮರಳುಗಾರಿಕೆಯನ್ನು ಪರಿಶೀಲಿಸಲು ತೆರಳಿದ್ದು, ಅಕ್ರಮ ಮರಳುಗಾರಿಕೆ ಕಂಡುಬಂದಿತ್ತು. ಆಗ ಅಲ್ಲಿಗೆ ಬಂದ 50ಕ್ಕೂ ಅಧಿಕ ಮಂದಿ ಅಕ್ರಮ ಕೂಟ ಕಟ್ಟಿಕೊಂಡು ಜಿಲ್ಲಾಧಿಕಾರಿ, ಎಸಿ, ಅಂಪಾರು ಗ್ರಾಮ ಲೆಕ್ಕಿಗ ಕಾಂತರಾಜು, ಡಿಸಿ ಕಾರು ಚಾಲಕ, ಅಂಗರಕ್ಷಕ ಪೃಥ್ವಿರಾಜ್ ಜೋಗಿ, ಎಸಿ ಪತಿ ಅವರಿಗೆ ಏಕವಚನದಲ್ಲಿ ಬೈದು ಕೊಲ್ಲುವ ಪ್ರಯತ್ನದೊಂದಿಗೆ ವಾಹನ ಗಳನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದರು ಎಂದು ದೂರಲಾಗಿತ್ತು.
ಉಡುಪಿಯಲ್ಲಿ ಪ್ರಕರಣ ದಾಖಲು: ಅಲ್ಲಿಂದ ಜಿಲ್ಲಾಧಿಕಾರಿ ಹಾಗೂ ಇತರ ಅಧಿಕಾರಿಗಳು ನೇರ ಉಡುಪಿ ನಗರ ಠಾಣೆಗೆ ಬಂದು ದೂರು ನೀಡಿದ್ದು, ಅದರಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 143, 147, 148, 341, 353, 323, 504, 506, 307 ಜೊತೆಗೆ 149 ಐಪಿಸಿ ಮತ್ತು 4(1) (ಎ) ಎಂ.ಎಂ.(ಡಿ ಮತ್ತು ಆರ್) ಕಾಯ್ದೆ 1957, 3(1), 42(1), 43(2) ಕೆ.ಎಂ.ಎಂ.ಸಿ.ಆರ್ ಕಾಯ್ದೆ 1994ರಂತೆ ಪ್ರಕರಣ ದಾಖಲಾಗಿತ್ತು.
ಬಳಿಕ ಕಾರ್ಯಾಚರಣೆಗೆ ಇಳಿದ ಸುಮಾರು 26ರಿಂದ 30 ಮಂದಿಯನ್ನು ಬಂಧಿಸಿದ್ದರು. ಬಂಧಿತರಲ್ಲಿ ಓರ್ವ ಬಾಲಾಪರಾಧಿಯಾಗಿದ್ದು, ಆರೋಪಿ ಭಾಸ್ಕರ ಮೊಗವೀರ ಬೆರಳು ತುಂಡಾಗಿ ಆಸ್ಪತ್ರೆಗೆ ದಾಖಲಾಗಿದ್ದ. ಈ ಘಟನೆಯನ್ನು ಖಂಡಿಸಿ ಹಲವು ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ಪ್ರತಿಭಟನೆಗಳನ್ನು ನಡೆಸಿದ್ದವು.
ಈ ಘಟನೆಯ ಹಿನ್ನೆಲೆಯಲ್ಲಿ ಐವರು ಉತ್ತರ ಪ್ರದೇಶದ ವಲಸೆ ಕಾರ್ಮಿಕರನ್ನು ಗಡಿಪಾರು ಮಾಡಿ ತಹಶೀಲ್ದಾರ್ ಆದೇಶ ನೀಡಿದ್ದರು. ಈ ಪ್ರಕರಣದಲ್ಲಿ ಅಮಾಯಕರನ್ನು ಬಂಧಿಸಲಾಗಿದೆ ಎಂದು ಆರೋಪಿಸಿ ಪೋಷಕರು ಉಡುಪಿ ನಗರ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದರು.
ಪ್ರಕರಣದ ತನಿಖೆ ನಡೆಸಿದ್ದ ಆಗಿನ ಉಡುಪಿ ಡಿವೈಎಸ್ಪಿ ಕುಮಾರಸ್ವಾಮಿ ಉಡುಪಿ ಜಿಲ್ಲಾ ಸರಕಾರಿ ಅಭಿಯೋಜಕಿ ಅವರಿಗೆ ಪ್ರಕರಣದ ಆರೋಪಪಟ್ಟಿ ಯನ್ನು ಸಲ್ಲಿಸಿದ್ದು, ಇದೀಗ ಆ ಆರೋಪ ಪಟ್ಟಿ ಪರಿಶೀಲನೆ ಹಂತದಲ್ಲಿದೆ. ಶೀಘ್ರವೇ ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ಪ್ರಕರಣದ ಎಲ್ಲ ಆರೋಪಿಗಳು ಈಗಾಗಲೇ ಜಾಮೀನ ಮೇಲೆ ಬಿಡುಗಡೆಗೊಂಡಿದ್ದಾರೆ ಎಂದು ಅಭಿಯೋಜಕಿ ಶಾಂತಿಭಾಯಿ ತಿಳಿಸಿದ್ದಾರೆ.
ಕಂಡ್ಲೂರಿನಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಯನ್ನು ಪರಿಶೀಲಿಸಲು ತೆರಳಿದ್ದಾಗ 50 ಕ್ಕೂ ಅಧಿಕ ಮಂದಿಯ ತಂಡ ನಮ್ಮ ಮೇಲೆ ಹಲ್ಲೆ ನಡೆಸಿ, ಕೊಲೆಗೆ ಯತ್ನಿಸಿರುವ ಘಟನೆ ನಡೆದು ಇಂದಿಗೆ ಒಂದು ವರ್ಷ ಸಂದಿದೆ. ಈಗಾಗಲೇ ಪ್ರಕರಣದ ತನಿಖೆ ಮುಗಿದಿದ್ದು, ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿರುವ ವಿಚಾರ ಎಸ್ಪಿ ಅವರಲ್ಲಿ ಕೆಲ ದಿನಗಳ ಹಿಂದೆ ಮಾತನಾಡಿದಾಗ ತಿಳಿದುಬಂದಿತ್ತು.
-ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಲ್ಲಾಧಿಕಾರಿ ಉಡುಪಿಹಿಂದಿನ ಡಿವೈಎಸ್ಪಿ ಕುಮಾರಸ್ವಾಮಿ ಈ ಪ್ರಕರಣದ ಕುರಿತು ತನಿಖೆ ನಡೆಸಿ ಜಿಲ್ಲಾ ಸರಕಾರಿ ಅಭಿಯೋಜಕಿಯವರಿಗೆ ಆರೋಪಪಟ್ಟಿಯನ್ನು ಸಲ್ಲಿಸಿದ್ದು, ಈಗ ಅದು ಪರಿಶೀಲನೆಯ ಹಂತದಲ್ಲಿದೆ. ಇನ್ನು ಶೀಘ್ರವೇ ಈ ಪ್ರಕರಣದ ವಿಚಾರಣೆಯು ನ್ಯಾಯಾಲಯದಲ್ಲಿ ಆರಂಭಗೊಳ್ಳಲಿದೆ.
-ಲಕ್ಷ್ಮಣ್ ನಿಂಬರಗಿ, ಪೊಲೀಸ್ ಅಧೀಕ್ಷಕರು, ಉಡುಪಿ ಜಿಲ್ಲೆ.