ಯುಎಇ ಉದ್ಯೋಗಿಗಳಿಗೆ ಸನ್ನಡತೆಯ ಪ್ರಮಾಣ ಪತ್ರ ಅಗತ್ಯವಿಲ್ಲ

Update: 2018-04-02 12:17 GMT

ದುಬೈ, ಎ. 2: ಸಂಯುಕ್ತ ಅರಬ್ ಸಂಸ್ಥಾನದ ಸರಕಾರವು ದೇಶಾದ್ಯಂತ ಉದ್ಯೋಗ ವೀಸಾ ಪಡೆಯಲು ಸನ್ನಡತೆಯ ಪ್ರಮಾಣ ಪತ್ರದ ಅಗತ್ಯತೆಯನ್ನು ತಾತ್ಕಾಲಿಕವಾಗಿ ಮುಂದಿನ ಆದೇಶದವರೆಗೆ ರದ್ದುಗೊಳಿಸಿದೆ. ಈ ಬಗ್ಗೆ ದೇಶದ ವಿದೇಶಾಂಗ ವ್ಯವಹಾರಗಳ ಮತ್ತು ಅಂತಾರಾಷ್ಟ್ರೀಯ ಸಹಕಾರ ಸಚಿವಾಲಯವು ಎಲ್ಲಾ ರಾಯಭಾರ ಹಾಗೂ ಕಾನ್ಸುಲೇಟ್ ಕಚೇರಿಗಳಿಗೂ ಸುತ್ತೋಲೆ ಹೊರಡಿಸಿದೆ.

ದೇಶಕ್ಕೆ ಉದ್ಯೋಗ ಉದ್ದೇಶದಿಂದ ಬರುವವರಿಗೆ ಸನ್ನಡತೆಯ ಪ್ರಮಾಣಪತ್ರವನ್ನು ರದ್ದುಪಡಿಸಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವವರಿಂದ ಇಂತಹ ಪ್ರಮಾಣ ಪತ್ರವನ್ನು ಎ. 1ರಿಂದ ಕೇಳುವ ಅಗತ್ಯವಿಲ್ಲವೆಂದೂ ಹೇಳಲಾಗಿದೆ. ದುಬೈಯಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಕೂಡ ಈ ವಿಚಾರವನ್ನು ದೃಢಪಡಿಸಿದೆ. ಉದ್ಯೋಗ ವೀಸಾಗಳಿಗೆ ಸನ್ನಡತೆಯ ಪ್ರಮಾಣ ಪತ್ರ ಅಗತ್ಯವಿಲ್ಲವೆಂದು ನಮಗೆ ಮಾಹಿತಿ ದೊರಕಿದೆ ಎಂದು ಟ್ವೀಟ್ ಒಂದರಲ್ಲಿ ಅದು ತಿಳಿಸಿದೆ.

ಫೆ. 4ರಂದು ಸರಕಾರ ಆದೇಶವೊಂದರಲ್ಲಿ ದೇಶಕ್ಕೆ ಉದ್ಯೋಗ ಅರಸಿಕೊಂಡು ಬರುವವರು ಸನ್ನಡತೆಯ ಪ್ರಮಾಣ ಪತ್ರ ಅಥವಾ ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರ ಒದಗಿಸಬೇಕೆಂದು ಹೇಳಿತ್ತು. ಆದರೆ ಇದೀಗ ಸರಕಾರದ ಬದಲಾದ ನಿರ್ಧಾರವನ್ನು ಎಲ್ಲಾ ದೂತಾವಾಸ ಕಚೇರಿಗಳೂ ಸ್ವಾಗತಿಸಿವೆ, ಸಂಯುಕ್ತ ಅರಬ್ ಸಂಸ್ಥಾನದಲ್ಲಿನ ಭಾರತದ ರಾಯಭಾರಿ ಇದನ್ನೊಂದು ದೊಡ್ಡ ಬೆಳವಣಿಗೆ ಎಂದೂ ತಿಳಿಸಿದ್ದಾರೆ. 

ಒಂಬತ್ತು ರಾಷ್ಟ್ರಗಳಿಂದ- ಭಾರತ, ಶ್ರೀಲಂಕಾ,ಇಂಡೋನೇಷ್ಯ, ಕೆನ್ಯ, ಬಾಂಗ್ಲಾದೇಶ, ಈಜಿಪ್ಟ್, ಟುನಿಷಿಯ, ಸೆನೆಗಲ್ ಹಾಗೂ ನೈಜೀರಿಯಾಗಳಿಂದ ದೇಶಕ್ಕೆ ಉದ್ಯೋಗ ಅರಸಿಕೊಂಡು ಬರುವವರಿಗೆ ಉತ್ತಮ ನಡತೆಯ ಪ್ರಮಾಣಪತ್ರ ಇನ್ನೂ ಕಡ್ಡಾಯವಾಗಿದೆಯೆಂಬ ವಿಚಾರದ ಬಗ್ಗೆ ಕಳೆದ ವಾರ ಸ್ವಲ್ಪ ಮಟ್ಟಿನ ಗೊಂದಲವಿತ್ತು. 

ಆದರೆ ಇದೀಗ ಸಚಿವಾಲಯದಿಂದ ಬಂದಿರುವ ಸ್ಪಷ್ಟೀಕರಣ ಎಲ್ಲಾ ಗೊಂದಲಗಳಿಗೆ ಅಂತ್ಯ ಹಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News