×
Ad

ಪಕ್ಷದಿಂದ ವಜಾಗೊಂಡ ಬಿ.ಎಂ.ಭಟ್ ಆರೋಪದಲ್ಲಿ ಹುರುಳಿಲ್ಲ: ಸಿಪಿಎಂ ಮುಖಂಡರ ಹೇಳಿಕೆ

Update: 2018-04-02 18:27 IST

ಮಂಗಳೂರು, ಎ.2: ಪಕ್ಷದಿಂದ ವಜಾಗೊಂಡ ಬಿ.ಎಂ.ಭಟ್ ಅವರ ಹೇಳಿಕೆ, ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಸಿಪಿಎಂ ಪಕ್ಷದ ದ.ಕ.ಜಿಲ್ಲಾ ಸಮಿತಿ ತಿಳಿಸಿದೆ.

ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಪಕ್ಷದ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ, ಸಿಪಿಎಂ ಪ್ರಜಾಪ್ರಭುತ್ವ ಕೇಂದ್ರವಾದದ ತತ್ವದಲ್ಲಿ ವಿಶ್ವಾಸವನ್ನು ಹೊಂದಿರುವ ಪಕ್ಷವಾಗಿದೆ. ಪಕ್ಷದ ಸದಸ್ಯರು ಈ ತತ್ವಗಳಿಗೆ ಬದ್ಧರಾಗಿರಬೇಕಾಗುತ್ತದೆ. ಪಕ್ಷವು ಶಿಸ್ತಿಗೆ ಪ್ರಾಮುಖ್ಯತೆಯನ್ನು ನೀಡುತ್ತದೆ.

ಬಿ.ಎಂ.ಭಟ್ ಪಕ್ಷದ ಶಿಸ್ತನ್ನು ಗಂಭೀರವಾಗಿ ಉಲ್ಲಂಘಿಸಿರುವುದರಿಂದ ಅವರನ್ನು ಪಕ್ಷದ ಜಿಲ್ಲಾ ಸಮಿತಿಯು ಜ.13ರಂದು ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಿದೆ. ಬಿ.ಎಂ.ಭಟ್‌ರ ಮನೆಯಿಂದ 7.5 ಲಕ್ಷ ರೂ. ಕಳ್ಳತನವಾಗಿರುವ ಬಗ್ಗೆ ಮಾಹಿತಿ ಬಂದಾಗ ಅಷ್ಟೊಂದು ಪ್ರಮಾಣದ ಹಣವನ್ನು ಮನೆಯಲ್ಲಿ ಶೇಖರಿಸಿಟ್ಟಿರುವ ಬಗ್ಗೆ ಆಗಲೇ ಅವರಿಂದ ಮಾಹಿತಿಯನ್ನು ಪಡೆಯಲಾಗಿತ್ತು. ಅದೇ ಸಂದರ್ಭ ಅವರ ಮೇಲೆ ಆರ್ಥಿಕ ಭ್ರಷ್ಟಾಚಾರ ಮತ್ತು ಅನೈತಿಕ ಚಟುವಟಿಕೆಗೆ ಸಂಬಂಧಿಸಿದ ಲಿಖಿತ ದೂರುಗಳು ಬಂದಿತ್ತು. ಈ ಬಗ್ಗೆ ರಚಿಸಲಾದ ತನಿಖಾ ಸಮಿತಿಯು ಬಿ.ಎಂ.ಭಟ್ ವಿರುದ್ಧದ ಆರೋಪವನ್ನು ರುಜುವಾತುಪಡಿಸಿತ್ತು. ಆದಾಗ್ಯೂ ಪಕ್ಷದ ಜಿಲ್ಲಾ ಸುತಿಯು ಬಿ.ಎಂ.ಭಟ್ ತನ್ನ ತಪ್ಪುಗಳನ್ನು ತಿದ್ದಿಕೊಂಡು ಸದಸ್ಯರಾಗಲು ಅವಕಾಶ ಕಲ್ಪಿಸಿ ಅವರಿಗೆ ಪಕ್ಷದೊಳಗಡೆ ಇದ್ದ ಉನ್ನತ ಸ್ಥಾನಮಾನಗಳನ್ನು ಮೊಟಕುಗೊಳಿಸಿ ಬೆಳ್ತಂಗಡಿ ತಾಲೂಕು ಸಮಿತಿ ಸದಸ್ಯರಾಗಿ ಉಳಿಸಿಕೊಂಡು ರೈತ ಘಟಕದಲ್ಲಿ ಕೆಲಸ ನಿರ್ವಹಿಸಲು ಸೂಚಿಸಿತ್ತು. ಇದಕ್ಕೆ ಪಕ್ಷದ ರಾಜ್ಯ ಹಾಗೂ ಕೇಂದ್ರ ಸಮಿತಿಯು ಒಪ್ಪಿಗೆಯನ್ನು ನೀಡಿತ್ತು. ಪಕ್ಷದೊಳಗಿನ ಕಂಟ್ರೋಲ್ ಕಮಿಟಿ ಕೂಡಾ ಬಿ.ಎಂ.ಭಟ್ ಮೇಲೆ ಕೈಗೊಂಡ ಶಿಸ್ತುಕ್ರಮ ಕ್ರಮಬದ್ಧವಾಗಿದೆ ಎಂದು ತಿಳಿಸಿತ್ತು ಎಂದರು.

ಪಕ್ಷದ ಜಿಲ್ಲಾ ಸಮ್ಮೇಳನವು ಅವರಿಗೆ ಯಾವುದೇ ಸ್ಥಾನಮಾನ ನೀಡದಿರುವ ತೀರ್ಮಾನಕ್ಕೆ ಬಂದಿರುವುದು ಕೂಡಾ ಅವರ ಅಶಿಸ್ತನ್ನು ಸರಿಪಡಿಸುವ ಉದ್ದೇಶದಿಂದ ಕೂಡಿರುತ್ತದೆ. ಆದರೆ ಬಿ.ಎಂ.ಭಟ್ ತನ್ನ ತಪ್ಪುಚಾಳಿಯನ್ನು ಬಿಡದೆ ಆರ್ಥಿಕ ಅವ್ಯವಹಾರ ಮತ್ತು ಅನೈತಿಕ ವ್ಯವಹಾರಗಳನ್ನು ಮುಂದುವರಿಸಿಕೊಂಡು ಹೋಗಿ ಪಕ್ಷದ ಎಚ್ಚರಿಕೆ, ಶಿಸ್ತುಕ್ರಮಗಳನ್ನು ಧಿಕ್ಕರಿಸುವ ಮಟ್ಟಿಗೆ ಹೋದಾಗ ಅವರಿಗೆ 2 ಬಾರಿ ಶೋಕಾಸ್ ನೋಟಿಸ್ ಜಾರಿಗೊಳಿಸಿತ್ತು. ಆ ಬಳಿಕವೂ ತನ್ನ ತಪ್ಪನ್ನು ಸರಿಪಡಿಸಿಕೊಳ್ಳದೆ ಪಕ್ಷದ ಸಂಘಟನಾ ತತ್ವಗಳನ್ನು ತಿರಸ್ಕರಿಸಿ ಪಕ್ಷದ ಜಿಲ್ಲಾ ಸಮಿತಿಯ ಮೇಲೆಯೇ ಹರಿಹಾಯುವ ಕೆಲಸವನ್ನು ಮಾಡಿದಾಗ ಸಮಿತಿಗೆ ಕಠಿಣ ಕ್ರಮ ಜರಗಿಸುವುದು ಅನಿವಾರ್ಯವಾಗಿತ್ತು. ತದನಂತರ ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಪಕ್ಷದ ವಿರುದ್ಧ ಮಾನಹಾನಿಕಾರಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಪಕ್ಷದ ಜಿಲ್ಲಾ ಸಮಿತಿಯ ತೀರ್ಮಾನದ ವಿರುದ್ಧವಾಗಿ ಸಮಿತಿಯೊಂದನ್ನು ರಚಿಸಿ ಪಕ್ಷದಿಂದ ಉಚ್ಚಾಟನೆಗೊಂಡಿದ್ದರೂ ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ಎಂಬ ರೀತಿಯ ಹೇಳಿಕೆ ನೀಡಿ ಗುಂಪುಗಾರಿಕೆ ನಡೆಸಿ 14 ಮಂದಿ ಸದಸ್ಯರನ್ನು ತನ್ನ ಸಮಿತಿಯ ಸದಸ್ಯರೆಂದು ಹೇಳಿಕೆಯನ್ನು ನೀಡುತ್ತಿದ್ದಾರೆ. ಈ ಬಗ್ಗೆ 14 ಮಂದಿಗೆ ಪಕ್ಷದ ಬೆಳ್ತಂಗಡಿ ತಾಲೂಕು ಸಮಿತಿಯು ನೋಟಿಸ್ ನೀಡಿದೆ. ಅದಕ್ಕೆ ಉತ್ತರವನ್ನು ನೀಡದ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ವಜಾಗೊಳಿಸಿರುವ ಬಗ್ಗೆ ಬೆಳ್ತಂಗಡಿ ತಾಲೂಕು ಸಮಿತಿಯು ಲಿಖಿತ ವರದಿ ನೀಡಿದೆ. ತಾನು ಸ್ವತ: ಭ್ರಷ್ಟಾಚಾರ ಎಸಗಿ ಪಕ್ಷದ ಗೌರವಕ್ಕೆ ಧಕ್ಕೆ ತಂದು ಇದೀಗ ಜಿಲ್ಲಾ ನಾಯಕರ ಮೇಲೆ ಆರೋಪ ಹೊರಿಸುತ್ತಿರುವ ಬಗ್ಗೆ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ. ಪಕ್ಷವು ಇಂತಹ ಗಂಭೀರವಾದ ಅಶಿಸ್ತನ್ನು ಸಹಿಸುವುದಿಲ್ಲ. ಎಷ್ಟೇ ದೊಡ್ಡ ನಾಯಕನಾಗಿದ್ದರೂ ಕಾರ್ಮಿಕ ಸಂಘಟನೆಗಳಿಗೆ ಸಂಬಂಧಿಸಿ ಸರಿಯಾಗಿ ಆರ್ಥಿಕ ದಾಖಲೆ ಪತ್ರವನ್ನಿಟ್ಟು ಹಣವನ್ನು ಬ್ಯಾಂಕ್ ಮುಖಾಂತರ ವ್ಯವಹಾರ ನಡೆಸಬೇಕು. ಅದರ ಬದಲಿಗೆ ತನ್ನ ಸ್ವಂತ ಹಣದಂತೆ ಉಪಯೋಗಿಸುತ್ತಿರುವುದನ್ನು ಪಕ್ಷ ಸಹಿಸುವುದಿಲ್ಲ ಎಂದು ವಸಂತ ಆಚಾರಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕೆ.ಆರ್.ಶ್ರೀಯಾನ್, ಜೆ.ಬಾಲಕೃಷ್ಣ ಶೆಟ್ಟಿ, ಕೆ. ಕೃಷ್ಣಪ್ಪಸಾಲ್ಯಾನ್, ಯು.ಬಿ.ಲೋಕಯ್ಯ, ವಾಸುದೇವ ಉಚ್ಚಿಲ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News