ಮದನಿ ನಗರ: ಮದ್ರಸ ಅಧ್ಯಾಪಕರ ವೇದಿಕೆ, ಟಿ.ಆರ್.ಎಫ್ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

Update: 2018-04-02 14:24 GMT

ಉಳ್ಳಾಲ, ಎ. 2: ಮದ್ರಸ ಅಧ್ಯಾಪಕರ ವೇದಿಕೆ ಮತ್ತು ಟ್ಯಾಲೆಂಟ್ ರಿಸರ್ಚ್ ಫೌಂಡೇಷನ್ ಜಂಟಿ ಆಶ್ರಯದಲ್ಲಿ ಕುತ್ತಾರು ಮದನಿ ನಗರದಲ್ಲಿ ಸೋಮವಾರ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಇಸ್ಲಾಂ ಸ್ವಚ್ಛತೆಯನ್ನು ಪ್ರತಿಪಾದಿಸುವ ಧರ್ಮ, ಈ ನಿಟ್ಟಿನಲ್ಲಿ ಜಾಗತಿಕ ಮುಸ್ಲಿಮರು ಸ್ವಚ್ಛತೆಗೆ ಪ್ರಥಮ ಸ್ಥಾನ ನೀಡುತ್ತಾರೆ ಎಂದು ಮದ್ರಸ ಅದ್ಯಾಪಕರ ವೇದಿಕೆಯ ಕೆ.ಎ. ಅಬ್ದುಲ್ ಅಝೀರ್ ಝುಹ್‌ರಿ ಪುಣಚ ಹೇಳಿದರು. ಅವರು ಮಂಗಳೂರಿನ ಮದ್ರಸ ಅದ್ಯಾಪಕರ ವೇದಿಕೆ ವತಿಯಿಂದ ಕುತ್ತಾರು ಮದನಿ ನಗರದಲ್ಲಿ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸಹಯೋಗದಲ್ಲಿ ನಡೆದ ಪರಿಸರ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಇಸ್ಲಾಂ ಧರ್ಮವೆಂದರೆ ಪ್ರಕೃತಿ ಧರ್ಮ, ಇಸ್ಲಾಮಿನ ಹಲವು ಪಾಠಗಳು ಪ್ರಕೃತಿಯನ್ನು ಸಂರಕ್ಷಿಸಲು ಎಚ್ಚರಿಸುತ್ತಿದೆ. ಪರಿಸರದೊಂದಿಗೆ ಸಂಬಂಧವಿಡದೆ ಕಡೆಗಣಿಸಿ ಮುಂದಕ್ಕೆ ಸಾಗುವುದು ಭೂಷಣವಲ್ಲ. ಮದರಸ ಅಧ್ಯಾಪಕರೆಂದಲ್ಲಿ ಕೇವಲ ಸಂದೇಶ ನೀಡುವವರು ಮಾತ್ರವಲ್ಲ, ಪ್ರಾಯೋಗಿಕವಾಗಿ ಮಾಡಿ ತೋರಿಸುವವರು ಎಂದು ಈ ಸಾಮಾಜಿಕ ಕಾರ್ಯದ ಮೂಲಕ ಸಾಬೀತಾಗಿದೆ. ಎಲ್ಲರ ಸಹಕಾರವನ್ನು ಯಾಚಿಸುತ್ತಾ ಸ್ವಸ್ಥ್ಯ ಸಮಾಜ ನಿರ್ಮಿಸಲು ಮದರಸ ಅಧ್ಯಾಪಕರಿಂದ ಪ್ರಯತ್ನವಾಗಿದೆ ಎಂದರು.

ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಸಲಹೆಗಾರ ರಫೀಕ್ ಮಾಸ್ಟರ್ ಮಾತನಾಡಿ, ಸ್ವಚ್ಛತೆ ಎಂಬುದು ಮುಸ್ಲಿಮನ ಸತ್ಯವಿಶ್ವಾಸದ ಅರ್ಧ ಭಾಗವಾಗಿದೆ. ಸ್ವಚ್ಛ ಭಾರತ ನಿರ್ಮಿಸುವ ಉದ್ದೇಶ ಟ್ಯಾಲೆಂಟ್ ರಿಸರ್ಚ್ ಪೌಂಡೇಷನ್ ಸಂಸ್ಥೆಯದ್ದಾಗಿದೆ. ಸ್ವಚ್ಛತೆ ಮಾಸಾಚರಣೆ ಕಾರ್ಯಕ್ರಮದ ಅಂಗವಾಗಿ ಅಡ್ಯಾರು, ಕಣ್ಣೂರು, ಫರಂಗಿಪೇಟೆ ಭಾಗಗಳಲ್ಲಿ ಸ್ವಚ್ಛತೆಯನ್ನು ನಡೆಸಲಾಗಿದೆ. ಮದರಸ ಅಧ್ಯಾಪಕರು ಸಂಸ್ಥೆ ಜತೆಗೆ ಕೈಜೋಡಿಸಿರುವ ಮೂಲಕ ಇನ್ನಷ್ಟು ಸಮಾಜಸೇವೆ ಮಾಡಲು ಸ್ಫೂರ್ತಿ ನೀಡಿದಂತಾಗಿದೆ ಎಂದರು.

ಮದ್ರಸ ಅದ್ಯಾಪಕರಾದ ಇಸ್ಮಾಯಿಲ್ ಸಖಾಫಿ ಮೊಂಟೆಪದವು, ಆಸಿಫ್ ಬಾಹಸನಿ ಅಮ್ಮೆಂಬಳ, ಅಬ್ದುಲ್ ಹಮೀದ್ ಮದನಿ ಅಳೇಕಲ, ಕೆ.ವೈ ಹಾರಿಸ್ ಹನೀಫಿ ಕುಂಡಡ್ಕ, ರಫೀಕ್ ಅಮ್ಜದಿ ಮಾವಿನಕಟ್ಟೆ, ಅಶ್ರಫ್ ಮುಸ್ಲಿಯಾರ್ ಪಾವೂರು, ಮುಹಮ್ಮದ್ ಕಾಕ ನಾಟೆಕಲ್ , ಟ್ಯಾಲೆಂಟ್ ರಿಸರ್ಚ್ ಫೌಂಡೇಷನ್ ಇದರ ಪ್ರಧಾನ ಕಾರ್ಯದರ್ಶಿ ಡಿ ಅಬ್ದುಲ್ ಹಮೀದ್ ಕಣ್ಣೂರು, ಸದಸ್ಯರಾದ ಅಬ್ದುಲ್ ಮಜೀದ್ ತುಂಬೆ, ಅಸ್ಫರ್ ಹುಸೈನ್, ನಕಾಶ್ ಬಾಂಬಿಲ, ಅಸ್ಲಂ ಗೂಡಿನಬಳಿ, ಅಹ್‌ಕಾಂ ಅಕ್ರಂ ಹಸನ್ ಉಪಸ್ಥಿತರಿದ್ದರು.

"ಪ್ರವಾದಿ ಅವರ ಸಂದೇಶವನ್ನು ಕಾರ್ಯರೂಪದಲ್ಲಿ ಮಾಡಿ, ತೋರಿಸಿ ಇಡೀ ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನು ರವಾನಿಸಿದ ನಮ್ಮ ಉಲಮಾಗಳಿಗೆ ನಾವು ಮನಸಾರೆ ಅಭಿನಂದಿಸುತ್ತಿದ್ದೇವೆ. ಅವರ ಈ ಸೇವೆಯು ನನಗೆ ಇನ್ನಷ್ಟು ಸಮಾಜ ಸೇವೆ ಮಾಡಲು ಸ್ಫೂರ್ತಿಯನ್ನು ತುಂಬಿದೆ. ಇದೇ ರೀತಿ ಮಿತ ಆಹಾರ ಸೇವನೆಯ ಬಗ್ಗೆ ಪ್ರವಾದಿವರ್ಯರ ಸಂದೇಶವನ್ನು ಜಾಗೃತಗೊಳಿಸಬೇಕಾಗಿದೆ. ಇದನ್ನು ಪಾಲಿಸುವುದರಿಂದ ಎಲ್ಲಾ ರೋಗಗಳಿಂದ ಮುಕ್ತರಾಗಿ ಉತ್ತಮ ಆರೋಗ್ಯದಿಂದ ಬದುಕಬಹುದು. ಈ ವಿಷಯದಲ್ಲಿ ನಾವೆಲ್ಲರೂ ಪ್ರಯತ್ನಿಸಬೇಕಾಗಿದೆ".

- ಅಬ್ದುಲ್ ರವೂಫ್ ಪುತ್ತಿಗೆ, ಸ್ಥಾಪಕಾಧ್ಯಕ್ಷರು, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News