ಬಿಜೆಪಿ ಜಯಗಳಿಸಲು ಪಕ್ಷೇತರ ಅಭ್ಯರ್ಥಿಗಳನ್ನು ಬೆಂಬಲಿಸುತ್ತಿರುವ ವಿಧಾನ ಪರಿಷತ್ ಸದಸ್ಯ: ಮಂಜುನಾಥ್ ಆರೋಪ

Update: 2018-04-02 14:42 GMT

ಮಂಗಳೂರು, ಎ. 2: ಹಾಲಿ ವಿಧಾನ ಪರಿಷತ್ ಸದಸ್ಯರೊಬ್ಬರು ನೈರುತ್ಯ ವಿಧಾನ ಪರಿಷತ್‌ನ ಶಿಕ್ಷಕರ ಕ್ಷೇತ್ರದಲ್ಲಿ ತಮ್ಮ ಪಕ್ಷ ಜಯಗಳಿಸಲು ಪಕ್ಷೇತರರಿಗೆ ಬೆಂಬಲ ನೀಡುವ ಮೂಲಕ ಮತ ವಿಭಜನೆಯ ತಂತ್ರಗಾರಿಕೆಯನ್ನು ನಡೆಸುತ್ತಿದ್ದಾರೆ ಎಂದು ನೈರುತ್ಯ ಶಿಕ್ಷಕರ ವಿಧಾನ ಪರಿಷತ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ. ಮಂಜುನಾಥ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಜೂನ್ ತಿಂಗಳಲ್ಲಿ ನಡೆಯಲಿರುವ ನೈರುತ್ಯ ಕ್ಷೇತ್ರದ ಶಿಕ್ಷಕರ ಹಾಗೂ ಪದವೀಧರ ವಿಧಾನ ಪರಿಷತ್ ಕ್ಷೇತ್ರದಲ್ಲಿ ಶಿಕ್ಷಕರ ಕ್ಷೇತ್ರದಿಂದ ವೃತ್ತಿಯಲ್ಲಿ ಶಿಕ್ಷಕನಾಗಿದ್ದ ನಾನು ಅಧಿಕೃತ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದರೂ ವಿರೋಧ ಪಕ್ಷಗಳು ನನ್ನ ವಿರುದ್ಧ ಅಪಪ್ರಚಾರದಲ್ಲಿ ತೊಡಗಿವೆ. ಕಳೆದ ಬಾರಿ ಅಲ್ಪ ಮತಗಳ ಅಂತರದಿಂದ ಜಯಗಳಿಸಿದ್ದ ಬಿಜೆಪಿ ಈ ಬಾರಿಯೂ ಜಯಗಳಿಸಲು ತಂತ್ರಗಾರಿಕೆಯಲ್ಲಿ ತೊಡಗಿದೆ ಎಂದು ಮಂಜುನಾಥ್ ಆರೋಪಿಸಿದ್ದಾರೆ.

ಚುನಾವಣೆಯಲ್ಲಿ ಜಯಗಳಿಸಲು ಶಿಕ್ಷಕರಿಗೆ ಬ್ಯಾಗ್ ಬಾಡೂಟ ನೀಡುತ್ತಿರುವ ಮೂಲಕ ಶಿಕ್ಷಕರ ಘನತೆಗೆ ಕುಂದು ತರುವ ರೀತಿಯ ಪ್ರಚಾರ ನಡೆಯುತ್ತಿದೆ ಎಂದು ಮಂಜುನಾಥ್  ಹೇಳಿದರು.

ಶಿಕ್ಷಕರ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಗಮನ:-  ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಶಿಕ್ಷಕರ ಕ್ಷೇತ್ರದ ಸಾಕಷ್ಟು ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈ ಗೊಂಡಿದೆ. ಹಿಂದಿನ ಬಿಜೆಪಿ ಹಾಗೂ ಜೆಡಿಎಸ್ ಸಮ್ಮಿಶ್ರ ಸರಕಾರ ಅನುದಾನಿತ ಶಿಕ್ಷಕರಿಗೆ ಪಿಂಚಣಿ ಸೌಲಭ್ಯವನ್ನು ನೀಡದೆ ಬರಿಗೈಯಲ್ಲಿ ಕಳುಹಿಸಿದೆ. ಹಳೆ ಪಿಂಚಣಿ ವ್ಯವಸ್ಥೆ ಕೇಂದ್ರ ಸರಕಾರದ ಸರಕಾರಿ ಸಂಸ್ಥೆಗಳಿಗೆ ಮಾತ್ರ ಇದೆ. ರಾಜ್ಯ ಸರಕಾರದ ಅನುದಾನಿತ ಶಿಕ್ಷಕರಿಗೆ ಇಲ್ಲದಂತಾಗಿದೆ. ಶಿಕ್ಷಕರ ಹಾಗೂ ಪವೀಧರ ಕ್ಷೇತ್ರ ಸೇವಾ ಕ್ಷೇತ್ರವಾಗಿದ್ದು, ಈ ಕ್ಷೇತ್ರಗಳು ರಾಜಕೀಯ ರಜಿತವಾಗಿರಬೇಕು ಎಂದು ಕಳೆದ ಬಾರಿ ಪಕ್ಷೇತರನಾಗಿ ಚುನಾವಣೆಯಲ್ಲಿ ಸ್ಫರ್ಧಿಸಿದ್ದೆ ಆದರೆ ಕೊನೆಯ ಕ್ಷಣದಲ್ಲಿ ಕೇವಲ 160 ಮತಗಳ ಅಂತರದಿಂದ ಪರಾಭವಗೊಂಡೆ. ಈ ಬಾರಿ ಕಾಂಗ್ರೆಸ್ ಪಕ್ಷದ ವತಿಯಿಂದ ಸ್ಪರ್ಧಿಸುತ್ತಿದ್ದೇನೆ. ಜಯಗಳಿಸುವ ಭರವಸೆ ಇದೆ ಎಂದು ಮಂಜುನಾಥ್ ತಿಳಿಸಿದ್ದಾರೆ.

ಶಿಕ್ಷಕನಾಗಿದ್ದ ನನಗೆ ಶಿಕ್ಷಕರ ಸಮಸ್ಯೆ ಚೆನ್ನಾಗಿ ತಿಳಿದಿದೆ. ನಾನು ಈ ಕ್ಷೇತ್ರದಿಂದ ಆಯ್ಕೆಯಾದರೆ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆಯನ್ನು ನೀಡುವುದು, ಎನ್‌ಸಿಆರ್‌ಟಿ ನಿಯಮದ ಪ್ರಕಾರ 1:40 ಅನುಪಾತದಲ್ಲಿ ಶಿಕ್ಷಕರ ನಿಯೋಜನೆ, ಅನುದಾನಿತ ಶಿಕ್ಷಕರಿಗೂ ಹಿಂದಿನ ಪಿಂಚಣೆ ಯೋಜನೆ, 1995ರಿಂದ 2005ರವರೆಗೆ ಸ್ಥಾಪನೆಯಾದ ಅನುದಾನ ರಹಿತ ಶಾಲೆಗಳನ್ನು ಅನುದಾನಿತ ಶಾಲೆಗಳ ವ್ಯಾಪ್ತಿಗೆ ಒಳಪಡಿಸುವುದು, ಭಡ್ತಿ ಹೊಂದಿದ ಶಿಕ್ಷಕರ ವೇತನ ತಾರತಮ್ಯದ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದಾಗಿ ಮಂಜುನಾಥ್ ಭರವಸೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್, ಇತರ ಮುಖಂಡರಾದ ಸದಾಶಿವ ಉಳ್ಳಾಲ್, ಆರಿಫ್ ಬಾವ, ರಘುರಾಜ್, ಲಾರೆನ್ಸ್, ಸಂತೋಷ್ ಶೆಟ್ಟಿ, ಪ್ರೇಮ್, ನೀರಜ್ ಚಂದ್ರಪಾಲ್, ನಝೀರ್ ಬಜಾಲ್ ಮೊದಲಾದವರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News