ನಿವೃತ್ತ ಪೊಲೀಸ್ ಅಧಿಕಾರಿಗಳ ಅನುಭವ ಇಲಾಖೆಗೆ ಅಗತ್ಯ: ಎಸ್ಪಿ ಲಕ್ಷ್ಮಣ ನಿಂಬರ್ಗಿ

Update: 2018-04-02 15:13 GMT

ಉಡುಪಿ, ಎ.2: ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ಜ್ಞಾನ ಮತ್ತು ಅನುಭವ ಇಲಾಖೆಗೆ ಬಹಳಷ್ಟು ಅಗತ್ಯವಾಗಿದೆ. ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ಸಮಾಜದಲ್ಲಿ ಉತ್ತಮ ಸ್ಥಾನಮಾನ ಮತ್ತು ಅವರ ಯೋಗ ಕ್ಷೇಮವನ್ನು ನೋಡಿಕೊಳ್ಳುವುದು ಇಲಾಖೆಯ ಕರ್ತವ್ಯವಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ಬಿ.ನಿಂಬರ್ಗಿ ಹೇಳಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಉಡುಪಿಯ ಚಂದು ಮೈದಾನದಲ್ಲಿ ಸೋಮವಾರ ನಡೆದ ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾ ಚರಣೆಯಲ್ಲಿ ಅವರು ಮಾತನಾಡುತಿದ್ದರು.

ಪೊಲೀಸ್ ಧ್ವಜವನ್ನು ಅನಾವರಣಗೊಳಿಸಿದ ನಿವೃತ್ತ ಪೊಲೀಸ್ ಉಪನಿರೀಕ್ಷಕ ರಾಜಗೋಪಾಲ್ ಮಾತನಾಡಿ, ಧ್ವಜ ದಿನಾಚರಣೆಯು ಪೊಲೀಸ್ ಧ್ವಜದ ಅಡಿಯಲ್ಲಿ ನಾವೆಲ್ಲ ಒಂದೇ ಎಂಬ ಸಂದೇಶವನ್ನು ಸಾರುತ್ತದೆ. ಸಾರ್ವಜನಿಕರ ಆಸ್ತಿಪಾಸ್ತಿ, ಪ್ರಾಣ ರಕ್ಷಣೆ ಪೊಲೀಸರು ಕರ್ತವ್ಯವಾಗಿದೆ ಎಂದು ಹೇಳಿದರು.

ಇತರ ಕಚೇರಿಗಳಲ್ಲಿ ಸಿಬ್ಬಂದಿಗಳಿಲ್ಲ ಎಂದು ಹೇಳಿ ಜನರನ್ನು ಹಿಂದಕ್ಕೆ ಕಳು ಹಿಸಿದರೆ ಯಾವುದೇ ಸಮಸ್ಯೆ ಆಗುವುದಿಲ್ಲ. ಆದರೆ ಪೊಲೀಸ್ ಠಾಣೆಗಳಿಗೆ ಜನ ತುರ್ತು ಸಂದರ್ಭದಲ್ಲಿ ಬರುವುದರಿಂದ ಅವರಿಗೆ ತಕ್ಷಣದ ಸೇವೆ ನೀಡುವ ಕೆಲಸವನ್ನು ಪೊಲೀಸರು ಮಾಡಬೇಕು. ದೂರು ನೀಡಲು ಬಂದವರನ್ನು ಕಾಯಿ ಸುವ ಕೆಲಸ ಮಾಡಬಾರದು ಎಂದರು.

ಬಹುತೇಕ ನಿವೃತ್ತ ಸಿಬ್ಬಂದಿಗಳಿಗೆ ಸ್ವಂತ ಮನೆಗಳಿರುವುದಿಲ್ಲ. ಆದುದರಿಂದ ಅವರು ನಿವೃತ್ತಿ ಆದ ತಕ್ಷಣ ಪೊಲೀಸ್ ವಸತಿ ಗೃಹದಿಂದ ತೆರವು ಮಾಡುವ ಬದಲು ಕನಿಷ್ಠ ಮೂರು ತಿಂಗಳು ಅಲ್ಲೇ ಉಳಿದುಕೊಳ್ಳಲು ಅವಕಾಶ ನೀಡಬೇಕು. ಆರೋಗ್ಯ ಭಾಗ್ಯ ಯೋಜನೆಯನ್ನು ನಿವೃತ್ತ ಸಿಬ್ಬಂದಿ ಹಾಗೂ ಅವರ ಕುಟುಂಬದವರಿಗೂ ವಿಸ್ತರಿಸಬೇಕೆಂದು ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ 67 ನಿವೃತ್ತ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ 5.5ಲಕ್ಷ ರೂ. ಮೊತ್ತದ ಕಲ್ಯಾಣ ನಿಧಿಯನ್ನು ವಿತರಿಸಲಾಯಿತು. ಡಿಎಆರ್‌ನ ಆರ್‌ಪಿಐ ರಾಘವೇಂದ್ರ ಆರ್. ನೇತೃತ್ವದಲ್ಲಿ ಪಥಸಂಚಲನ ನಡೆಯಿತು. ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ವಂದಿಸಿ ದರು. ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂನ ಎಸ್ಸೈ ಬಿ.ಮನಮೋಹನ ರಾವ್ ಕಾರ್ಯಕ್ರಮ ನಿರೂಪಿಸಿದರು.

3.84ಲಕ್ಷ ಮೌಲ್ಯದ ಪೊಲೀಸ್ ಧ್ವಜ ಸ್ವೀಕಾರ

ಪ್ರತಿವರ್ಷ ಪೊಲೀಸ್ ಧ್ವಜವನ್ನು ಮಾರಾಟ ಮಾಡಿ ಆ ಮೂಲಕ ನಿಧಿ ಸಂಗ್ರಹಿಸಿ ಜಿಲ್ಲಾ ಕಲ್ಯಾಣ ಸಮಿತಿ, ಕೇಂದ್ರ ಹಾಗೂ ರಾಜ್ಯ ಸಮಿತಿಗೆ ನೀಡಲಾಗುವುದು. ಪೊಲೀಸ್ ಪ್ರಧಾನ ಕಚೇರಿಯಿಂದ ಈ ಬಾರಿ 3.84ಲಕ್ಷ ರೂ. ಮೌಲ್ಯದ ಪೊಲೀಸ್ ಧ್ವಜಗಳನ್ನು ಸ್ವೀಕರಿಸಿದ್ದು, ಇದನ್ನು ಮಾರಾಟ ಮಾಡಿ ನಿವೃತ್ತ ಪೊಲೀಸ್ ಕಲ್ಯಾಣ ನಿಧಿ ಖಾತೆಗೆ ಹಣ ಜಮಾ ಮಾಡಲಾಗುತ್ತದೆ. ಈಗಾಗಲೇ ಉಳಿತಾಯ ಖಾತೆಯಲ್ಲಿ 5.6 ಲಕ್ಷ ರೂ. ಹಾಗೂ ನಿಶ್ಚಿತ ಠೇವಣಿ ಯಲ್ಲಿ 13.12 ಲಕ್ಷ ರೂ. ಇದ್ದು, ಅದನ್ನು ನಿವೃತ್ತರ ವೈದ್ಯಕೀಯ ವೆಚ್ಚಕ್ಕೆ ಬಳಸಲಾಗುತ್ತದೆ. ಮುಂದಿನ ವರ್ಷ ನೆರವಿನ ಮೊತ್ತವನ್ನು ಹೆಚ್ಚಿಸಲಾಗುವುದು ಎಂದು ಎಸ್ಪಿ ಲಕ್ಷ್ಮಣ್ ನಿಂಬರ್ಗಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News