×
Ad

ವಿಧಾನಸಭಾ ಚುನಾವಣೆ: ಆರ್‌ಪಿಐ 10 ಅಭ್ಯರ್ಥಿಗಳ ಪಟ್ಟಿ ಪ್ರಕಟ

Update: 2018-04-02 21:51 IST

ಉಡುಪಿ, ಎ.2: ಕರ್ನಾಟಕ ವಿಧಾನಸಭೆಗೆ ಮುಂದಿನ ತಿಂಗಳು ನಡೆಯುವ ಚುನಾವಣೆಯಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ವೈ. ಅಂಬೇಡ್ಕರ್ ಅಧ್ಯಕ್ಷತೆಯ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಒಟ್ಟು 40 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದು, ಮೊದಲ ಹಂತದ ಹತ್ತು ಮಂದಿ ಅಭ್ಯರ್ಥಿಗಳ ಹೆಸರುಗಳನ್ನು ಈಗಾಗಲೇ ಅಂತಿಮಗೊಳಿಸಲಾಗಿದೆ ಎಂದು ಭಾರತೀಯ ರಿಪಬ್ಲಿಕನ್ ಪಾರ್ಟಿಯ ಕರ್ನಾಟಕ ರಾಜ್ಯಾಧ್ಯಕ್ಷ ಆರ್. ಮೋಹನ್‌ರಾಜ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಆರ್‌ಪಿಐನ ಮೊದಲ ಹತ್ತು ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಿದ ಅವರು, ಎರಡನೇ ಪಟ್ಟಿಯನ್ನು ಮುಂದಿನ ವಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಪ್ರಕಾಶ್ ಅಂಬೇಡ್ಕರ್ ಅವರು ಮೈಸೂರಿನಲ್ಲಿ ಪ್ರಕಟಿಸಲಿದ್ದಾರೆ ಎಂದರು. ಎ.10ರ ಸುಮಾರಿಗೆ ಮೈಸೂರಿಲ್ಲಿ ಸಭೆ ಸೇರಿ ಚರ್ಚಿಸಿ 12ರ ವೇಳೆಗೆ ಎರಡನೇ ಪಟ್ಟಿಯ ಘೋಷಣೆಯಾಗಲಿದೆ ಎಂದು ಅವರು ತಿಳಿಸಿದರು.

ಅಂಬೇಡ್ಕರ್ ಅವರು ಈ ದೇಶಕ್ಕೆ ನೀಡಿದ ಸಂವಿಧಾನ ಉಳಿಯಬೇಕು. ಸಂವಿಧಾನದ ಆಶಯಗಳು ಜಾರಿಗೊಳ್ಳಬೇಕೆಂಬ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಪಕ್ಷದ ವತಿಯಿಂದ ಕೆಲಸ ಮಾಡುತಿದ್ದೇವೆ. ರಾಜ್ಯದಲ್ಲಿರುವ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳ ಸಂವಿಧಾನದ ಆಶಯ ಗಳಿಗೆ ವಿರುದ್ಧವಾಗಿದ್ದು, ಸಂವಿಧಾನವನ್ನು ರಕ್ಷಿಸುವಲ್ಲಿ ಈ ಮೂರೂ ಪಕ್ಷಗಳು ಸಂಪೂರ್ಣವಾಗಿ ವಿಫಲವಾಗಿವೆ ಎಂದವರು ಆರೋಪಿಸಿದರು.

ಇಂದು ಕೇಂದ್ರದಲ್ಲಿರುವ ನರೇಂದ್ರ ಮೋದಿ ಸರಕಾರದಿಂದ ದೇಶದ ಸಂವಿಧಾನಕ್ಕೆ ಅತೀ ದೊಡ್ಡ ಅಪಾಯ ಎದುರಾಗಿದೆ. ಸಂವಿಧಾನದ ಬದಲಾವಣೆಗೆ ನಾವು ಬಂದಿದ್ದೇವೆ ಎಂದು ಸಚಿವರೇ ನೇರವಾಗಿ ಹೇಳುತ್ತಾರೆ. ಒಂದು ದೇಶ, ಒಂದು ತೆರಿಗೆ ಇವರ ಧೋರಣೆಯಾಗಿದ್ದು, ಮುಂದೆ ಒಂದು ದೇಶ ಒಂದು ಧರ್ಮವೂ ಘೋಷಣೆಯಾಗಬಹುದು ಎಂದು ಮೋಹನ್‌ರಾಜ್ ನುಡಿದರು.

ಈ ನಿಟ್ಟಿನಲ್ಲಿ ಆರ್‌ಪಿಐ, ಉಡುಪಿ ಕ್ಷೇತ್ರಕ್ಕೆ ಯುವ ಸಂಘಟಕ, ಪ್ರಗತಿಪರ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಶೇಖರ್ ಹಾವಂಜೆ ಸೇರಿದಂತೆ ಒಟ್ಟು ಹತ್ತು ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. ರಾಜ್ಯದ ಜನತೆಗೆ ಇವರ ಬೆಂಬಲ ಹಾಗೂ ಆಶೀರ್ವಾದ ಬೇಕು ಎಂದವರು ವಿನಂತಿಸಿದರು.

ವಿದ್ಯಾರ್ಥಿಗಳು, ಆದಿವಾಸಿಗಳು, ಶೋಷಿತರು ಹಾಗೂ ಮಹಿಳೆಯರ ಪರವಾಗಿ ಹೋರಾಡಲು ಕಟಿಬದ್ಧರಾದ ಆರ್‌ಪಿಐ ಅಭ್ಯರ್ಥಿಗಳನ್ನು ಈ ಬಾರಿಯ ಚುನಾವಣೆಯಲ್ಲಿ ಬಹುಮತದಿಂದ ಚುನಾಯಿಸಬೇಕು ಎಂದರು. ಮುಂದಿನ ಪಟ್ಟಿಯಲ್ಲಿ ಕಾರ್ಕಳದಿಂದ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ ಎಂದರು.

ಅತೀ ಶೀಘ್ರದಲ್ಲಿ ಪಕ್ಷದ ವತಿಯಿಂದ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ಯಲ್ಲಿ ಆದಿವಾಸಿಗಳ ಬೃಹತ್ ಸಮಾವೇಶವೊಂದನ್ನು ಆಯೋಜಿಸುವ ಸಿದ್ಧತೆ ನಡೆಯುತ್ತಿದೆ ಎಂದೂ ಬೆಂಗಳೂರು ನಗರದ ಸಿ.ವಿ.ರಾಮನ್ ನಗರ ಮೀಸಲು ಕ್ಷೇತ್ರದ ಅಭ್ಯರ್ಥಿಯಾಗಿರುವ ಆರ್.ಮೋಹನ್‌ರಾಜ್ ಹೇಳಿದರು.

ಆರ್‌ಪಿಐ ಅಭ್ಯರ್ಥಿಗಳ ಮೊದಲ ಪಟ್ಟಿ ಹೀಗಿದೆ

1.ಅಂಕುಶ್ ಗೋಖಲೆ-ಹುಮನಾಬಾದ್ ಕ್ಷೇತ್ರ (ಬೀದರ್ ಜಿಲ್ಲೆ), 2. ಶೇಖರ್ ಹಾವಂಜೆ-ಉಡುಪಿ (ಉಡುಪಿ), 3.ಪರಶುರಾಮ್ ನೀಲನಾಯಕ- ಬಾಗಲಕೋಟೆ (ಬಾಗಲಕೋಟೆ), 4.ಶಾಸ್ತ್ರಿ ಹೊಸಮನಿ-ಬಬಲೇಶ್ವರ (ವಿಜಯಪುರ), 5.ಮಕ್ತುಮ ಶಾ ಅಲಿ ನದಾಫ್-ವಿಜಯನಗರ (ವಿಜಯಪುರ), 6.ಎಸ್.ಶಿವಲಿಂಗಂ-ಕೆಜಿಎಫ್(ಎಸ್‌ಸಿ ಮೀಸಲು- ಕೋಲಾರ), 7.ಆರ್.ಮೋಹನರಾಜ್-ಸಿವಿರಾಮನ್ ನಗರ (ಎಸ್‌ಸಿ ಮೀಸಲು ಬೆಂಗಳೂರು ನಗರ, 8. ಜೆ.ಕೆ.ಗೋಪಾಲ್-ಎಚ್.ಡಿ.ಕೋಟೆ (ಎಸ್‌ಟಿಮೀಸಲು- ಮೈಸೂರು), 9.ಎಚ್.ಬಿ.ದೇವರಾಜ್- ಪಿರಿಯಾಪಟ್ಟಣ (ಮೈಸೂರು), 10.ಈರಪ್ಪ ಎಂ.ಕಸನ್-ಯಾದಗಿರಿ (ಯಾದಗಿರಿ).

ಶೇಖರ್ ಹಾವಂಜೆ ಪರಿಚಯ

ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಶೇಖರ್ ಹಾವಂಜೆ ಅವರು ಹಾವಂಜೆ ನಿವಾಸಿಯಾಗಿದ್ದು, ಸದಾ ಕಾಲ ಜನರ ನಡುವೆ ವಿವಿಧ ಹೋರಾಟಗಳಲ್ಲಿ ಸಕ್ರಿಯರಾಗಿದ್ದಾರೆ. ಕಳೆದ ಸುಮಾರು 17 ವರ್ಷಗಳಿಂದ ಅವರು ವಿವಿಧ ಸಾಮಾಜಿಕ ಹೋರಾಟಗಳಲ್ಲಿ ಪಾಲ್ಗೊಂಡಿದ್ದಾರೆ.

ತಮ್ಮದೇ ಆದ ಯುವಕ ಪಡೆಯೊಂದನ್ನು ಕಟ್ಟಿಕೊಂಡಿರುವ ಇವರು ಈ ಮೂಲಕ ದಲಿತರ, ಅಲ್ಪಸಂಖ್ಯಾತರ ಹಾಗೂ ಹಿಂದುಳಿದ ವರ್ಗಗಳ ಬಡವರ ಶ್ರೇಯೋಭಿವೃದ್ಧಿಗಾಗಿ ದುಡಿಯುತಿದ್ದಾರೆ. ಅಲ್ಲದೇ ರಾಜ್ಯಮಟ್ಟದ ದಲಿತ ಸಂಘರ್ಷ ಸಮಿತಿ(ಭೀಮವಾದ)ಯ ಉಡುಪಿ ಜಿಲ್ಲಾ ಮಟ್ಟದ ಸಮಿತಿಯ ಮುಂಚೂಣಿ ನಾಯಕರು. ಜಿಲ್ಲೆಯ ಹಲವು ಸಾಮಾಜಿಕ ಹಾಗೂ ಪ್ರಗತಿಪರ ಹೋರಾಟಗಳಲ್ಲಿ ನೇರವಾಗಿ ಭಾಗವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News