ರೈಲು ಹಳಿಯಲ್ಲಿ ನಡೆಯುತ್ತಿದ್ದಾಗ 800 ಅಡಿ ಆಳದ ಕಂದಕಕ್ಕೆ ಜಾರಿದ ಗರ್ಭಿಣಿ

Update: 2018-04-03 13:31 GMT

ಮುಂಬೈ, ಎ.3: ಇಲ್ಲಿಗೆ ಸಮೀಪದ ಮಥೆರನ್ ಎಂಬಲ್ಲಿ ರೈಲು ಹಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ 25 ವರ್ಷದ ಗರ್ಭಿಣಿ ಮಹಿಳೆಯೊಬ್ಬರು 800 ಅಡಿ ಆಳದ ಕಂದಕವೊಂದಕ್ಕೆ ಜಾರಿ ಬಿದ್ದರೂ 80 ಅಡಿ ಆಳದಲ್ಲಿದ್ದ ಗಿಡಗಂಟಿಗಳ ನಡುವೆ ಆಕೆ ಸಿಲುಕಿದ್ದರಿಂದ ಕೂಡಲೇ ಆಕೆಯನ್ನು ರಕ್ಷಣಾ ತಂಡವೊಂದು ರಕ್ಷಿಸಿ ಹತ್ತಿರದ ಆಸ್ಪತ್ರೆಗೆ ದಾಖಲಿಸಿದೆ. ನಂತರ ಆಕೆಯನ್ನು ಮುಂಬೈಯ ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾಳೆ. 

ಮಹಿಳೆಯನ್ನು ವಿಜಯಾ ಎಂದು ಗುರುತಿಸಲಾಗಿದೆ. ಆಕೆ  ಒಂಬತ್ತು ತಿಂಗಳ ಹಿಂದೆ ಸುರೇಶ್ ಪವಾರ್ (33) ಎಂಬಾತನನ್ನು ವರಿಸಿದ್ದಳು. ಇಬ್ಬರಿಗೂ ಈ ಹಿಂದೆ ಬೇರೆ ಮದುವೆಯಾಗಿದ್ದು, ಹಿಂದಿನ ವಿವಾಹದಿಂದ ಮಕ್ಕಳಿದ್ದಾರೆ.

ರವಿವಾರ ಇಬ್ಬರೂ ಮಥೆರನ್ ಎಂಬಲ್ಲಿರುವ ಕರೆ ಗಣಪತಿ ದೇವಳಕ್ಕೆ ಭೇಟಿ ನೀಡುವ ಸಲುವಾಗಿ ಮಕ್ಕಳ ರೈಲಿನ ಹಳಿಯಲ್ಲಿ ಸಾಗುತ್ತಿದ್ದಾಗ ಮಹಿಳೆ ಕಣಿವೆಗೆ ಜಾರಿ ಬಿದ್ದಿದ್ದರು. ಆಕೆಯ ಬೆನ್ನಿಗೆ ಗಾಯಗಳುಂಟಾಗಿದ್ದರೂ ಆಕೆಯ ಗರ್ಭದಲ್ಲಿರುವ ಮಗು ಸುರಕ್ಷಿತವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ತನ್ನನ್ನು ತನ್ನ ಪತಿ ನೂಕಿದ್ದಾಗಿ ಆಕೆ ಆಸ್ಪತ್ರೆಗೆ ಸಾಗಿಸುವಾಗ ಹೇಳಿದ್ದರೂ ಆಸ್ಪತ್ರೆ ತಲುಪಿದ ನಂತರ ವೈದ್ಯರಲ್ಲಿ ಇದೊಂದು ಆಕಸ್ಮಿಕ ಘಟನೆ ಎಂದಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

ಆಕೆಯ ಪತಿಯ ವಿರುದ್ಧ ಯಾರೂ ದೂರು ನೀಡಿಲ್ಲವಾದ ಕಾರಣ ಇಲ್ಲಿಯ ತನಕ ಪೊಲೀಸರು ಯಾವುದೇ ಪ್ರಕರಣ ದಾಖಲಿಸಿಲ್ಲ. ಆಕೆ ಗುಣಮುಖಳಾದ ನಂತರ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಪೊಲೀಸರು ಯೋಚಿಸಿದ್ದು, ದಂಪತಿಯ ಸಂಬಂಧಿಕರಿಂದಲೂ ಮಾಹಿತಿ ಕೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News