ಚಿತ್ರಕಲೆಯಿಂದ ಕ್ರಿಯಾಶೀಲ ಚಟುವಟಿಕೆ ಸಾಧ್ಯ: ಎ.ಈಶ್ವರಯ್ಯ
ಉಡುಪಿ, ಎ.3: ಮನಸ್ಸಿಗೂ ಮೆದುಳಿಗೂ ಕೆಲಸ ನೀಡುವ ಕ್ರಿಯಾಶೀಲ ಚಟುವಟಿಕೆ ಚಿತ್ರಕಲೆಯಿಂದ ದೊರಕಲು ಸಾಧ್ಯ ಎಂದು ಕಲಾ ವಿಮರ್ಶಕ ಎ.ಈಶ್ವರಯ್ಯ ಹೇಳಿದ್ದಾರೆ.
ಉಡುಪಿ ಚಿತ್ರಕಲಾ ಮಂದಿರ ಕಲಾ ವಿದ್ಯಾಲಯದ ವಿಭೂತಿ ಆರ್ಟ್ ಗ್ಯಾಲರಿಯಲ್ಲಿ ವಿದ್ಯಾಲಯದ ಪದವಿ ವಿದ್ಯಾರ್ಥಿಗಳಿಂದ ಐದು ದಿನಗಳ ಕಾಲ ಏರ್ಪಡಿಸಲಾದ ಚಿತ್ರಕಲಾ ಪ್ರದರ್ಶನ ‘ಬ್ಲಾಕ್‌ಲೈನ್’ನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕಲಾಕೃತಿಗಳನ್ನು ಪ್ರಕೃತಿ ಹಾಗೂ ಸಹಜತೆಗೆ ವಿರುದ್ಧವಾಗಿ ರಚಿಸುವುದು ನಮ್ಮ ಮುಂದಿರುವ ಸವಾಲು. ಕಪ್ಪು ಬಿಳುಪು ಶಾಶ್ವತವಾಗಿರುವ ಪರಿಕಲ್ಪನೆಯಾಗಿದೆ. ಕ್ರಿಯಾಶೀಲ ಚಿಂತನೆ ಅದರಲ್ಲಿ ಅಡಕವಾಗಿದೆ. ಚಿತ್ರಕಲೆಯು ಮಾನವನ ಪ್ರಥಮ ಸಂವಹನ ಕಲೆ ಎಂದರು.
ಯಾವುದೇ ತಯಾರಿ ಇಲ್ಲದೆಯೂ ಚಿತ್ರಕಲಾ ಕ್ಷೇತ್ರವನ್ನು ಪ್ರವೇಶ ಮಾಡಬಹುದಾಗಿದೆ. ಅನುಕರಣೆ ಈ ಕಲೆಯ ಮೊದಲ ಹೆಜ್ಜೆಯಾಗಿದೆ. ಸಂತೋಷ, ದುಃಖ, ಸೌಂದರ್ಯ, ಬಿಭತ್ಸವನ್ನು ಕಲಾಕೃತಿಯಲ್ಲಿ ತರುವುದು ಸವಾಲಿನ ಕೆಲಸವಾಗಿದೆ ಎಂದು ಅವರು ತಿಳಿಸಿದರು.
ಅಧ್ಯಕ್ಷತೆಯನ್ನು ಚಿತ್ರಕಲಾ ಮಂದಿರದ ನಿವೃತ್ತ ಪ್ರಾಂಶುಪಾಲ ಕೆ.ಎಲ್.ಭಟ್ ವಹಿಸಿದ್ದರು. ಚಿತ್ರಕಲಾ ಮಂದಿರದ ನಿರ್ದೇಶಕ ಯು.ಸಿ.ನಿರಂಜನ್ ಉಪಸ್ಥಿತ ರಿದ್ದರು. ಪ್ರದೀಪ್ ಕುಮಾರ್ ಸ್ವಾಗತಿಸಿದರು. ರಂಜಿತ್ ವಂದಿಸಿದರು. ಮೇಘಾ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.
ಕಲಾಮಂದಿರದ 14 ಕಲಾವಿದರು ಕಪ್ಪು ಬಣ್ಣದ ಪೆನ್‌ನಲ್ಲಿ ರಚಿಸಿದ 27 ಕಲಾಕೃತಿಗಳನ್ನು ಇಲ್ಲಿ ಪ್ರದರ್ಶಿಸಲಾಗಿತ್ತು. ಈ ಪ್ರದರ್ಶನವು ಎ.7ರವರೆಗೆ ಬೆಳಗ್ಗೆ 10ರಿಂದ ಸಂಜೆ 5ಗಂಟೆಯವರೆಗೆ ಸಾರ್ವಜನಿಕರ ವೀಕ್ಷಣೆಗೆ ಲಭ್ಯ ವಿರುತ್ತದೆ.