×
Ad

ಉದ್ಯೋಗ ಖಾತ್ರಿ ಯೋಜನೆ; ಪ.ಜಾ.ಪ.ಪಂ ಗಳಿಗೆ ಉದ್ಯೋಗ ಚೀಟಿ ವಿತರಣೆ : ರಾಜ್ಯದಲ್ಲಿ ದ.ಕ ಪ್ರಥಮ

Update: 2018-04-03 20:07 IST

ಮಂಗಳೂರು,ಎ,3: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ 2017-18ನೆ ಸಾಲಿನಲ್ಲಿ ಪ.ಜಾ,ಪ.ಪಂಗಳ ಎಲ್ಲಾ ಅರ್ಹ ಕುಟುಂಬಗಳಿಗೆ ಉದ್ಯೋಗ ಚೀಟಿ ವಿತರಿಸುವ ಮೂಲಕ ಶೇ.100 ಪ್ರಗತಿ ಸಾಧಿಸಿದ ರಾಜ್ಯದ ಪ್ರಥಮ ಜಿಲ್ಲೆ ಎಂಬ ಹೆಗ್ಗಳಿಗೆ ದಕ್ಷಿಣ ಕನ್ನಡ ಪಾತ್ರವಾಗಿದೆ ಎಂದು ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್.ರವಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ದ.ಕ ಜಿಲ್ಲೆಯ ಪ.ಜಾ.ಪ.ಪಂ ಒಟ್ಟು 31,731 ಅರ್ಹ ಕುಟುಂಬಗಳಿಗೆ ಉದ್ಯೋಗ ಚೀಟಿ ವಿತರಿಸಲಾಗಿದೆ. 2016ರ ಡಿಸೆಂಬರ್ ವರೆಗೆ 11,740 ಕುಟುಂಬಗಳಿಗೆ ಉದ್ಯೂಗ ಚೀಟಿ ವಿತರಿಸಲಾಗಿತ್ತು .ಬಳಿಕ ಆಂದೋಲದ ಮಾದರಿಯಲ್ಲಿ ನಡೆದ ಕಾರ್ಯಾಚರಣೆಯ ಮೂಲಕ ಈ ವಿಭಾಗದಲ್ಲಿ ಜಿಲ್ಲೆಯಲ್ಲಿ ಶೇ. 100 ಪ್ರಗತಿ ಸಾಧಿಸಲಾಗಿದೆ. ಜಿಲ್ಲೆಯ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ 6,177.44 ಲಕ್ಷ ಅನುದಾನವನ್ನು ಬಳಸಿಕೊಳ್ಳಲಾಗಿದೆ. ಕಳೆದ ಒಂದು ದಶಕದಲ್ಲಿ ಇದು ಗರಿಷ್ಠ ಮೊತ್ತವಾಗಿದೆ. 2017-18ರಲ್ಲಿ 17,37,784 ಮಾನವ ದಿನಗಳ ಗುರಿ ನಿಗದಿಯಾಗಿದ್ದು 15,12,780 ಮಾನವ ದಿನ ಗಳ ಉದ್ಯೋಗ ನೀಡಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯ ಇತಿಹಾಸದಲ್ಲಿ ಬೆಳ್ತಂಗಡಿ ಮತ್ತು ಸುಳ್ಯ ತಾಲೂಕು ಪಂಚಾಯತ್‌ಗಳು ಶೇ. 100 ಸಾಧನೆ ಮಾಡಿವೆ. ನಗರ ಪ್ರದೇಶದಲ್ಲಿ ಮಂಗಳೂರು ತಾಲೂಕು ಪಂಚಾಯತ್ ವ್ಯಾಪ್ತಿಯಲ್ಲಿ ಗರಿಷ್ಠ ಅನುದಾನ ಬಳಸಿಕೊಳ್ಳಲಾಗಿದೆ. ಸ್ವಸಹಾಯ ಸಂಘಗಳನ್ನು ಬಲಪಡಿಸಲು ರಾಜ್ಯದಲ್ಲಿ ಗರಿಷ್ಠ ಪ್ರಮಾಣದ ಸಂಜೀವಿನಿ ವರ್ಕ್ ಶೆಡ್‌ಗಳ ಕಾಮಗಾರಿಗಳನ್ನು ಅನುಷ್ಠಾನಗೊಳಿಸ ಲಾಗಿದೆ. 33 ಕಾಮಗಾರಿಗಳಿಗೆ ಮಂಜೂರಾತಿ ನೀಡಲಾಗಿದೆ. ಜಲಧಾರ ಕಾರ್ಯಕ್ರಮದ ಮೂಲಕ 460 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಡಾ.ಎಂ.ಆರ್.ರವಿ ತಿಳಿಸಿದ್ದಾರೆ.

ನರೇಗಾದಲ್ಲಿ ಉತ್ತಮ ಸಾಧನೆ ಮಾಡಿದ ಎರಡು ತಾಲೂಕುಗಳಿಗೆ ಎ.7ರಂದು ಜಿ.ಪಂ.ಸಭಾಂಗಣದಲ್ಲಿ ಪ್ರಮಾಣ ಪತ್ರ ನೀಡಿ ಸಾಧನೆಯನ್ನು ಗುರುತಿಸಲಾಗುವುದು ಎಂದು ಡಾ.ರವಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News