×
Ad

ಇಸ್ರೇಲ್‌ಗೆ ತಾಯ್ನೆಲ ಹೊಂದುವ ಹಕ್ಕಿದೆ

Update: 2018-04-03 20:09 IST

ವಾಶಿಂಗ್ಟನ್, ಎ. 3: ಇಸ್ರೇಲ್‌ಗೆ ತನ್ನದೇ ಆದ ತಾಯ್ನೆಲವನ್ನು ಹೊಂದುವ ಹಕ್ಕಿದೆ ಎಂದು ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಸೋಮವಾರ ಹೇಳಿದ್ದಾರೆ. ಇದು ಇಸ್ರೇಲ್ ಕುರಿತ ಸೌದಿ ಅರೇಬಿಯದ ನಿಲುವಿನಲ್ಲಿ ಆಗಿರುವ ಮಹತ್ವದ ಬದಲಾವಣೆಯಾಗಿದೆ.

ಸೌದಿ ಅರೇಬಿಯ ಮತ್ತು ಇಸ್ರೇಲ್ ಈಗಲೂ ಔಪಚಾರಿಕ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿಲ್ಲ. ಆದರೆ, ಇತ್ತೀಚಿನ ವರ್ಷಗಳಲ್ಲಿ, ಉಭಯ ದೇಶಗಳ ಸಂಬಂಧಗಳನ್ನು ಸುಧಾರಿಸಲು ತೆರೆಮರೆಯ ಪ್ರಯತ್ನಗಳು ಬಿರುಸಿನಿಂದ ನಡೆಯುತ್ತಿದ್ದವು.

ಎರಡೂ ದೇಶಗಳು ಇರಾನನ್ನು ತಮ್ಮ ಅತ್ಯಂತ ದೊಡ್ಡ ಬಾಹ್ಯ ಬೆದರಿಕೆ ಎಂಬುದಾಗಿ ಪರಿಗಣಿಸಿವೆ. ಅದೇ ವೇಳೆ, ಅಮೆರಿಕವು ಉಭಯ ದೇಶಗಳ ಮಿತ್ರ ದೇಶವಾಗಿದೆ. ಇಸ್ರೇಲ್ ಮತ್ತು ಫೆಲೆಸ್ತೀನ್ ನಡುವಿನ ಸಂಘರ್ಷವು, ಇಸ್ರೇಲ್ ಮತ್ತು ಸೌದಿ ಅರೇಬಿಯ ನಡುವಿನ ಪೂರ್ಣ ಪ್ರಮಾಣದ ರಾಜಿಗೆ ಅಡ್ಡಿಯಾಗಿದೆ. ಆದಾಗ್ಯೂ, ಇಸ್ರೇಲ್‌ನ ಸಾರ್ವಭೌಮತ್ವಕ್ಕೆ ಸೌದಿ ಅರೇಬಿಯ ಬೆಂಬಲ ನೀಡುತ್ತದೆ.

ಅಮೆರಿಕದ ಸುದ್ದಿ ಮ್ಯಾಗಝಿನ್ ‘ದಿ ಅಟ್ಲಾಂಟಿಕ್’ನ ಪ್ರಧಾನ ಸಂಪಾದಕ ಜೆಫ್ರಿ ಗೋಲ್ಡ್‌ಬರ್ಗ್‌ರಿಗೆ ನೀಡಿದ ಸಂದರ್ಶನವೊಂದರಲ್ಲಿ, ಸೌದಿ ಯುವರಾಜರು ಇಸ್ರೇಲ್‌ನ ‘ತಾಯ್ನೆಲ’ದ ಹಕ್ಕಿನ ಬಗ್ಗೆ ಮಾತನಾಡಿದ್ದಾರೆ.

ತಮ್ಮ ಪೂರ್ವಜರ ತಾಯ್ನೆಲದ ಒಂದು ಭಾಗದಲ್ಲಾದರೂ ದೇಶವನ್ನು ಹೊಂದುವ ಹಕ್ಕು ಯಹೂದಿಯರಿಗಿದೆಯೇ ಎಂಬ ಪ್ರಶ್ನೆಯನ್ನು ಗೋಲ್ಡ್‌ಬರ್ಗ್ ಕೇಳಿದರು.

‘‘ಪ್ರತಿಯೊಬ್ಬರಿಗೂ ತಮ್ಮ ಶಾಂತಿಯುತ ದೇಶದಲ್ಲಿ ಬದುಕುವ ಹಕ್ಕಿದೆ ಎಂದು ನಾನು ಭಾವಿಸುತ್ತೇನೆ’’ ಎಂಬುದಾಗಿ ಸೌದಿ ಯುವರಾಜ ಆ ಪ್ರಶ್ನೆಗೆ ಉತ್ತರಿಸಿದರು.

ಮುಹಮ್ಮದ್ ಬಿನ್ ಸಲ್ಮಾನ್ 3 ವಾರಗಳ ಅಮೆರಿಕ ಪ್ರವಾಸದಲ್ಲಿದ್ದಾರೆ.

‘‘ತಮ್ಮದೇ ಆದ ನೆಲವನ್ನು ಹೊಂದುವ ಹಕ್ಕು ಫೆಲೆಸ್ತೀನೀಯರು ಮತ್ತು ಇಸ್ರೇಲಿಗರಿಗೆ ಇದೆ ಎಂದು ನಾನು ಭಾವಿಸುತ್ತೇನೆ’’ ಎಂದರು.

‘‘ಆದರೆ, ಸ್ಥಿರತೆ ಮತ್ತು ಸಾಮಾನ್ಯ ಸಂಬಂಧದ ಬಗ್ಗೆ ಖಾತರಿ ಹೊಂದುವುದಕ್ಕಾಗಿ ನಾವು ಶಾಂತಿ ಒಪ್ಪಂದಗಳನ್ನು ಹೊಂದುವುದು ಅಗತ್ಯವಾಗಿದೆ’’ ಎಂದು ಯುವರಾಜ ನುಡಿದರು.

2002ರಿಂದಲೂ ಸೌದಿ ಅರೇಬಿಯ ಅರಬ್ ಶಾಂತಿ ಪ್ರಕ್ರಿಯೆಯ ಪ್ರಮುಖ ಪ್ರಾಯೋಜಕ ದೇಶವಾಗಿದೆ. ಇಸ್ರೇಲ್-ಫೆಲೆಸ್ತೀನ್ ಸಂಘರ್ಷಕ್ಕೆ ಎರಡು-ರಾಷ್ಟ್ರ ಪರಿಹಾರವೇ ಸೂಕ್ತ ಎನ್ನುವುದು ಅರಬ್ ಶಾಂತಿ ಪ್ರಕ್ರಿಯೆ ನಿಲುವಾಗಿದೆ.

ಆದರೆ, ಇಸ್ರೇಲ್‌ಗೆ ತಾಯ್ನಾಡನ್ನು ಹೊಂದುವ ಹಕ್ಕಿದೆ ಎಂಬುದಾಗಿ ಈವರೆಗೆ ಯಾವುದೇ ಹಿರಿಯ ಸೌದಿ ನಾಯಕರು ಹೇಳಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News