×
Ad

ಜಾತ್ರೋತ್ಸವದಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಎಚ್ಚರ ವಹಿಸಿ : ಕೃಷ್ಣಮೂರ್ತಿ

Update: 2018-04-03 20:21 IST

ಪುತ್ತೂರು,ಎ.3: ಈ ಬಾರಿಯ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ಜಾತ್ರೆಯ ಸಂದರ್ಭ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನಲೆಯಲ್ಲಿ ನೀತಿ ಸಂಹಿತೆಯ ಉಲ್ಲಂಘನೆಯಾಗದಂತೆ ಎಚ್ಚರ ವಹಿಸುವಂತೆ ಪುತ್ತೂರು ಸಹಾಯಕ ಕಮೀಷನರ್ ಮತ್ತು ಚುನಾವಣಾಧಿಕಾರಿ ಎಚ್.ಕೆ ಕೃಷ್ಣಮೂರ್ತಿ ಸಲಹೆ ನೀಡಿದರು. 

ಅವರು ಮಂಗಳವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ವಾರ್ಷಿಕ ಜಾತ್ರೆಯ ಪ್ರಯುಕ್ತ ವಿವಿಧ ಇಲಾಖೆಗಳ ಅಧಿಕಾರಿಗಳ ಮತ್ತು ಭಕ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. 

ಕೆಎಸ್ಸಾರ್ಟಿಸಿ, ಮೆಸ್ಕಾಂ, ನಗರಸಭೆ, ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳು ಜಾತ್ರೆಯ ಸಂದರ್ಭದಲ್ಲಿ ನಿರ್ವಹಿಸುವ ಕರ್ತವ್ಯವನ್ನು ಅತ್ಯಂತ ಶಿಸ್ತುಬದ್ಧವಾಗಿ ನಿರ್ವಹಿಸಬೇಕು. ಪೊಲೀಸ್ ಇಲಾಖೆ ಬಂದೋಬಸ್ತ್ ಮತ್ತು ಸಂಚಾರ ವ್ಯವಸ್ಥೆಯ ಕುರಿತಂತೆ ಗಮನಹರಿಸಬೇಕು. ಅಗ್ನಿಶಾಮಕ ದಳದವರು ಸುಡುಮದ್ದು ಪ್ರದರ್ಶನದ ಸ್ಥಳದಲ್ಲಿ ಎಲ್ಲಾ ರೀತಿಯ ಮುಂಜಾಗರೂಕತಾ ಕ್ರಮವನ್ನು ಅನುಸರಿಸುವಂತೆ ಅವರು ಸೂಚಿಸಿದರು. 

ಜಾತ್ರೆಯ ಸಂದರ್ಭದಲ್ಲಿ ಬ್ಯಾನರ್ ಮತ್ತು ಬಂಟಿಂಗ್ಸ್ ಗಳನ್ನು ಅಳವಡಿಸುವ ಕುರಿತು ನೀತಿ ಸಂಹಿತೆಯ ಪಾಲನೆಯಾಗಬೇಕು ಎಂದ ಅವರು ತಳಿರುತೋರಣಗಳಿಂದ ಸಿಂಗರಿಸುವ ಮೂಲಕ ನಮ್ಮ ಸಂಸ್ಕೃತಿಯ ಹಿನ್ನಲೆಯಲ್ಲಿ ಜಾತ್ರೆಯ ಆಚರಣೆಯನ್ನು ಮಾಡಬೇಕು.ನೀತಿ ಸಂಹಿತೆಯ ವಿಚಾರದಲ್ಲಿ ಯಾವುದೇ ರಿಯಾಯಿತಿಗಳನ್ನು ನೀಡಲು ಚುನಾವಣಾ ಆಯೋಗದ ಅನುಮತಿಯಿಲ್ಲ. ಆದ ಕಾರಣ ಎಲ್ಲರೂ ಕಾನೂನಿಗೆ ಬದ್ಧರಾಗಿ ಆಯೋಗದೊಂದಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.

ಎ.16ರಂದು ಸಂಪ್ರದಾಯದಂತೆ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ಭಂಡಾರವು ಪುತ್ತೂರು ಶ್ರೀ ದೇವಾಲಯಕ್ಕೆ ಆಗಮಿಸಲಿದ್ದು, ನೂತನ ಬೆಳ್ಳಿಪಲ್ಲಕ್ಕಿಯಲ್ಲಿ ಈ ಬಾರಿ ಭಂಡಾರ ಆಗಮಿಸುವುದರಿಂದ ಪಿ&ಟಿ ರಸ್ತೆಯ ಬದಲು ಬಪ್ಪಳಿಗೆ-ಬೈಪಾಸ್‍ನಿಂದ ಪಕ್ಕದ ರಸ್ತೆಯ ಮೂಲಕ ಭಂಡಾರ ಎಂದಿನಂತೆ ಬಂಗರ ಕಾಯರ್‍ಕಟ್ಟೆ ಮೂಲಕ ಮಾಮೂಲು ದಾರಿಯಲ್ಲಿ ಆಗಮಿಸಲಿದೆ. ದಾರಿ ಬದಲಾವಣೆಯ ಕುರಿತು ಪ್ರಶ್ನಾಮಾರ್ಗದಲ್ಲಿ ದೈವಗಳ ಅಪ್ಪಣೆ ಸಿಕ್ಕಿದೆ. ಕ್ಷೇತ್ರದ ತಂತ್ರಿಗಳು ಒಪ್ಪಿಗೆ ನೀಡಿದ್ದಾರೆ ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತಿಮ್ಮಪ್ಪ ಗೌಡ ಮಾಹಿತಿ ನೀಡಿದರು.

ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎನ್. ಸುಧಾಕರ ಶೆಟ್ಟಿ ಮಾತನಾಡಿ ಕಳೆದ ವರ್ಷ ಎಲ್ಲರ ಸಹಕಾರದಿಂದ ಪುತ್ತೂರು ಜಾತ್ರೆ ಅತ್ಯಂತ ಯಶಸ್ವಿಯಾಗಿ ನಡೆದಿದೆ. ದೇವಾಲಯದ ವತಿಯಿಂದ ಎಲ್ಲಾ ಇಲಾಖೆಗಳಿಗೂ ಸಹಕಾರ ನೀಡಲಾಗುತ್ತದೆ. ಶುಚಿತ್ವದ ಕುರಿತು ವಿಶೇಷ ಗಮನ ಹರಿಸಲಾಗುತ್ತದೆ. ಜಾತ್ರೆಯ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯ ಎಂದರು. 

ವೇದಿಕೆಯಲ್ಲಿ ಪುತ್ತೂರು ನಗರ ಪೊಲೀಸ್ ಇನ್ಸ್ ಪೆಕ್ಟರ್ ಶರಣ ವಿ.ಎಚ್., ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಜಗದೀಶ್, ತಹಶೀಲ್ದಾರ್ ಅನಂತ ಶಂಕರ ಉಪಸ್ಥಿತರಿದ್ದರು. 

ಸಭೆಯಲ್ಲಿ ಧಾರ್ಮಿಕ ಪರಿಷತ್ ಸದಸ್ಯ ಎನ್.ಕೆ. ಜಗನ್ನಿವಾಸ ರಾವ್, ಬಪ್ಪಳಿಗೆ ಕಿಟ್ಟಣ್ಣ ಗೌಡ, ರಾಜೇಶ ಬನ್ನೂರು ಮತ್ತಿತರರು ಸಲಹೆ ನೀಡಿದರು. ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕರುಣಾಕರ ರೈ, ಯು.ಪಿ. ರಾಮಕೃಷ್ಣ, ಜಾನು ನಾಯ್ಕ, ರೋಹಿಣಿ ಆಚಾರ್ಯ, ನಯನಾ ರೈ, ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News