×
Ad

ಪುತ್ತೂರು : ಕ್ಷೇತ್ರದ ಹೊರಗಿನವರಿಗೆ ಟಿಕೆಟ್ ನೀಡಿದಲ್ಲಿ ಜೆಡಿಎಸ್‍ನಿಂದ ತಟಸ್ಥ ನಿಲುವಿಗೆ ನಿರ್ಧಾರ

Update: 2018-04-03 20:37 IST

ಪುತ್ತೂರು,ಎ.3 : ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪುತ್ತೂರು ವಿಧಾನಸಭಾ ಕ್ಷೇತ್ರದ ಒಳಗಿನವರಿಗೆ ಅವಕಾಶ ನೀಡದೆ ಕ್ಷೇತ್ರದ ಹೊರಗಿನವರಿಗೆ ಅವಕಾಶ ನೀಡಿದಲ್ಲಿ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಚುನಾವಣೆಯಲ್ಲಿ ತಟಸ್ಥವಾಗಿ ಉಳಿಯುವ ನಿರ್ಧಾರವನ್ನು ಜೆಡಿಎಸ್ ಪದಾಧಿಕಾರಿಗಳ ಮತ್ತು ಕಾರ್ಯಕರ್ತರ ಸಭೆಯಲ್ಲಿ ಕೈಗೊಳ್ಳಲಾಗಿದೆ. ಅಲ್ಲದೆ ಈ ನಿರ್ಧಾರವನ್ನು ಪಕ್ಷದ ರಾಜ್ಯ ನಾಯಕರಿಗೆ ತಿಳಿಸಲು ತೀರ್ಮಾನಿಸಲಾಗಿದೆ. 

ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷ ಐ.ಸಿ.ಕೈಲಾಸ್ ಗೌಡ ಕೆದಂಬಾಡಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಸಂಜೆ ಜೆಡಿಎಸ್ ಪಕ್ಷದ ಪದಾಧಿಕಾರಿಗಳ ಮತ್ತು ಕಾರ್ಯಕರ್ತರ ಸಭೆ ಪಕ್ಷದ ಕಚೇರಿಯಲ್ಲಿ ನಡೆಯಿತು.

ಪುತ್ತೂರು ಕ್ಷೇತ್ರದಿಂದ ಸ್ಪರ್ಧಿಸಲು ಕ್ಷೇತ್ರ ಸಮಿತಿಯ ಅಧ್ಯಕ್ಷ ಐ.ಸಿ.ಕೈಲಾಸ್ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ ಅಶ್ರಫ್ ಕಲ್ಲೇಗ ಅವರ ಹೆಸರನ್ನು ಶಿಫಾರಸು ಮಾಡಲು ಹಾಗೂ ಅವರಿಬ್ಬರಲ್ಲಿ ಯಾರನ್ನೇ ಪಕ್ಷ ಅಭ್ಯರ್ಥಿಯಾಗಿ ಘೋಷಣೆ ಮಾಡಿದರೂ ಪಕ್ಷದ ಪರ ಕೆಲಸ ಮಾಡುವುದೆಂದು ಸಭೆಯಲ್ಲಿ ಅಭಿಪ್ರಾಯಕ್ಕೆ ಬರಲಾಯಿತು. 

ಕ್ಷೇತ್ರ ಸಮಿತಿಯ ಅಧ್ಯಕ್ಷ ಐ.ಸಿ.ಕೈಲಾಸ್ ಗೌಡ ಕೆದಂಬಾಡಿ ಅವರು ಮಾತನಾಡಿ ರಾಜ್ಯದಲ್ಲಿ ಜೆಡಿಎಸ್ ಪರ ಅಲೆಯಿದೆ. ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರೈತರ ಸಾಲ ಮನ್ನಾ ಮಾಡುವುದಾಗಿ ಕುಮಾರಸ್ವಾಮಿ ಅವರು ಈಗಾಗಲೇ ಘೋಷಣೆ ಮಾಡಿದ್ದಾರೆ. ರೈತಾಪಿ ವರ್ಗ ಜೆಡಿಎಸ್ ಪಕ್ಷದತ್ತ ಒಲವು ತೋರುತ್ತಿದ್ದು, ಪಕ್ಷವನ್ನು ಅಧಿಕಾರಕ್ಕೆ ತರುವ ಎಲ್ಲಾ ಪ್ರಯತ್ನಗಳು ನಡೆಯುತ್ತದೆ ಎಂದರು.  

ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ಜೆಡಿಎಸ್ ಕಾರ್ಯಾಧ್ಯಕ್ಷ ಅಬ್ದುಲ್ ರಹಿಮಾನ್ ಯುನಿಕ್ ಅವರು ಮಾತನಾಡಿ ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ಹೊರಗಿನವರಾದ ಸುಬ್ರಹ್ಮಣ್ಯದ ದಿನೇಶ್ ಗೌಡ ಅವರಿಗೆ ಪಕ್ಷ ಟಿಕೇಟು ನೀಡಿದ ಕಾರಣ ಪಕ್ಷಕ್ಕಿದ್ದ ಮತವನ್ನು ಕಳಕೊಳ್ಳುವಂತಾಗಿತ್ತು. ಈ ಬಾರಿ ಪುತ್ತೂರು ಕ್ಷೇತ್ರದ ಒಳಗಿನವರೇ ಅಭ್ಯರ್ಥಿ ಆಗಬೇಕು ಎಂದರು. 

ಜೆಡಿಎಸ್ ರಾಜ್ಯ ಮುಖಂಡ ಶ್ರೇಯಾಂಸ್ ಕುಮಾರ್ ಅವರು ಮಾತನಾಡಿ ಈ ಬಾರಿಯ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬರುವುದಿಲ್ಲ. ಹಾಗಾಗಿ ಜೆಡಿಎಸ್ ಪಕ್ಷವೇ ರಾಜ್ಯದಲ್ಲಿ ಕಿಂಗ್‍ಮೇಕರ್ ಆಗಲಿದೆ ಎಂದರು. 

ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಅಶ್ರಫ್ ಕಲ್ಲೇಗ, ಕಡಬ ಘಟಕದ ಅಧ್ಯಕ್ಷ ಸಯ್ಯದ್ ಮೀರಾ ಸಾಹೇಬ್, ರಾಜ್ಯ ಮುಖಂಡ ಇಬ್ರಾಹಿಂ ಗೋಳಿಕಟ್ಟೆ ಅವರು ಮಾತನಾಡಿದರು. 

ಜೆಡಿಎಸ್ ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ಪದ್ಮಾಮಣಿ, ಪುತ್ತೂರು ಕ್ಷೇತ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಸಾಲ್ಯಾನ್, ಉಪ್ಪಿನಂಗಡಿ ಘಟಕದ ಅಧ್ಯಕ್ಷ ಕವಿರಾಜ್ ಗುಂಡ್ಯ,ಪುತ್ತೂರು ಕ್ಷೇತ್ರ ಸಮಿತಿಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಶಿವ್ ಸಾಲ್ಯಾನ್, ಅಲ್ಪಸಂಖ್ಯಾತ ಘಟಕದ ರಾಜ್ಯ ಮುಖಂಡ ಹಂಝ ಕಬಕ, ತಾಲ್ಲೂಕು ಘಟಕದ ಅಧ್ಯಕ್ಷ ಕರೀಂ ಪಳ್ಳತ್ತೂರು, ಕ್ಷೇತ್ರ ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News