ಸ್ನೇಹಾಲಯದ ನೆರವು : ಮೂರು ವರ್ಷಗಳ ಬಳಿಕ ಕುಟುಂಬ ಸೇರಿದ ಯುವಕ
ಮಂಗಳೂರು, ಎ.30: ಕಳೆದ ಮೂರು ವರ್ಷಗಳಿಂದ ಮನೆಯಿಂದ ದೂರವಾಗಿದ್ದ ಯುವಕನನ್ನು ನಗರದ ಸ್ನೇಹಾಲಯವು ಉಪಚರಿಸಿ, ಕೌನ್ಸಿಲಿಂಗ್ ಮಾಡಿ ಆತನನ್ನು ಕುಟುಂಬ ಸೇರುವಂತೆ ಮಾಡಿದೆ.
ಕಳೆದ ಡಿ. 16ರಂದು ಕಂಕನಾಡಿಯ ಮಾರುಕಟ್ಟೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ರಾಜು ಗುಪ್ತ (27) ಎಂಬಾತನನ್ನು ಸ್ನೇಹಾಲಯಕ್ಕೆ ಕರೆತರಲಾಗಿತ್ತು. ಈತನ ಸ್ಥಿತಿಯನ್ನು ಅರಿತ ಸ್ನೇಹಾಲಯದವರು ಚಿಕಿತ್ಸೆಗಾಗಿ ಯೆನೆಪೋಯ ಮೆಡಿಕಲ್ ಆಸ್ಪತ್ರೆಗೆ ದಾಖಲಿಸಿದ್ದರು. ರಾಜು ಗುಪ್ತ ಸಹಜ ಸ್ಥಿತಿಗೆ ಮರಳಿದ ಬಳಿಕ ಸ್ನೇಹಾಲಯಕ್ಕೆ ಕರೆತಂದು ಅಲ್ಲಿ ಕೌನ್ಸಿಲಿಂಗ್ ಮಾಡಲಾಯಿತು. ಈ ಸಂದರ್ಭದಲ್ಲಿ ಆತ ತಾನು ಉತ್ತರಪ್ರದೇಶದ ಸಂತ್ ಕಬಿರ್ ನಗರದ ನಿವಾಸಿ ಎಂದು ವಿಳಾಸವನ್ನು ತಿಳಿಸಿದ್ದಾನೆ. ಬಳಿಕ ಆತನನ್ನು ಶಾರದಾ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಗಿದೆ.
ರಾಜು ಗುಪ್ತ 2015ರಿಂದ ಮನೆಯನ್ನು ತೊರೆದಿದ್ದಾರೆ. ಆತನ ಕುಟುಂಬವನ್ನು ಸಂಪರ್ಕಿಸಿ ಮಾಹಿತಿ ನೀಡಲಾಗಿದ್ದು, ಕುಟುಂಬ ಸದಸ್ಯರು ಮಂಗಳೂರಿಗೆ ಆಗಮಿಸಿದ್ದು, ಅವರಿಗೆ ರಾಜು ಗುಪ್ತರನ್ನು ಹಸ್ತಾಂತರಿಸಲಾಗಿದೆ ಎಂದು ಸ್ನೇಹಾಲಯದ ಪ್ರಕಟನೆ ತಿಳಿಸಿದೆ.