×
Ad

ಕಳೆದುಹೋದ ಸರವನ್ನು ಹುಡುಕಿಕೊಟ್ಟ ಸಿಸಿಟಿವಿ !

Update: 2018-04-03 22:03 IST

ಸುಳ್ಯ,ಎ.3: ಮಹಿಳೆಯೋರ್ವರಿಂದ ನಷ್ಟವಾದ ಬೆಲೆ ಬಾಳುವ ಡೈಮಂಡ್ ಸರವೊಂದನ್ನು ಸಿಸಿಟಿವಿ ಸಹಕಾರದಲ್ಲಿ ಪೊಲೀಸರು ಪತ್ತೆ ಹಚ್ಚಿ ವಾರಿಸುದಾರರಿಗೆ ನೀಡಿದ ಘಟನೆ ನಡೆದಿದೆ. ಮೊಗರ್ಪಣೆಯ ಮಹಿಳೆಯೋರ್ವರ ಲಕ್ಷಕ್ಕಿಂತಲೂ ಬೆಲೆ ಬಾಳುವ ಡೈಮಂಡ್ ಸರ ಸುಳ್ಯ ನಗರದ ಜಟ್ಟಿಪಳ್ಳ ಕ್ರಾಸ್ ರಸ್ತೆಯ ಪರಿಸರದಲ್ಲಿ ನಷ್ಟವಾಯಿತು. ಈ ಕುರಿತು ಹುಡುಕಾಟ ನಡೆಸಿದರೂ ಸಿಗದ ಕಾರಣ ಮಹಿಳೆಯು ಸರ ನಷ್ಟವಾದ ಬಗ್ಗೆ ಸುಳ್ಯ ಪೊಲೀಸರ ಗಮನಕ್ಕೆ ತಂದಿದ್ದರು. ಆದರೆ ಮಹಿಳೆಯು ಈ ಕುರಿತು ಲಿಖಿತ ದೂರು ನೀಡಿರಲಿಲ್ಲ. 

ಸುಳ್ಯ ಎಸ್‍ಐ ಮಂಜುನಾಥ್ ಅವರು ಸುಳ್ಯ ನಗರದಲ್ಲಿ ಅಳವಡಿಸಲಾದ ಸಿಸಿಟಿವಿ ದಾಖಲೆಗಳನ್ನು ಪರಿಶೀಲಿಸಿದಾಗ ಸರವನ್ನು ವ್ಯಕ್ತಿಯೋರ್ವರು ಹೆಕ್ಕಿಕೊಳ್ಳುವುದು ಕಂಡು ಬರುತ್ತದೆ. ನಗರದಲ್ಲಿ ಅಲ್ಲಲ್ಲಿ ಪೊಲೀಸ್ ಇಲಾಖೆ ವತಿಯಿಂದ ಮತ್ತು ಖಾಸಗೀಯವರು ಅಳವಡಿಸಿದ ವಿವಿಧ ಸಿಸಿಟಿವಿ ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿದಾಗ ಸರ ಸಿಕ್ಕಿದ ವ್ಯಕ್ತಿಯನ್ನು ಪತ್ತೆ ಹಚ್ಚಲಾಯಿತು. ಈತನನ್ನು ಠಾಣೆಗೆ ಕರೆಸಿ ವಿಚಾರಿಸಿದಾಗ ಸರ ಸಿಕ್ಕಿರುವುದು ಒಪ್ಪಿ ಅದನ್ನು ಹಿಂತಿರುಗಿಸಿದರು. ಬಳಿಕ ಸರವನ್ನು ವಾರೀಸುದಾರರಿಗೆ ಹಸ್ತಾಂತರಿಸಲಾಯಿತು. ಒಟ್ಟಿನಲ್ಲಿ ಸುಳ್ಯ ನಗರದಾದ್ಯಂತ ಸ್ಥಾಪಿಸಲಾದ ಸಿಸಿ ಕ್ಯಾಮರಾ ಕಣ್ಗಾವಲು ಬೆಲೆ ಬಾಳುವ ಸರ ಮಹಿಳೆಗೆ ಮತ್ತೆ ದೊರೆಯುವಂತೆ ಮಾಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News